ಬೆಂಗಳುರು : ನಗರದಲ್ಲಿ ಲೀಸ್ ಹಾಗೂ ಬಾಡಿಗೆ ಮನೆಗಳ ಡಿಮ್ಯಾಂಡ್ ಹೆಚ್ಚಾಗುತ್ತಿರುವುದನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. “ಮನೆ ಸಿಗದವರಿಗೆ ಸಹಾಯ ಮಾಡ್ತೀವಿ”, “ಲೀಸ್ ಹಣ ನಮಗೆ ಕೊಡಿ, ನಿಮ್ಮ ಮನೆಯ ಬಾಡಿಗೆಯನ್ನು ನಾವು ಕಟ್ಟುತ್ತೇವೆ” ಎಂದು ನಂಬಿಸಿ ನೂರಾರು ಜನರಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪ ಜಾನ್ಸ್ ಅಸೆಟ್ ಎಂಬ ಕಂಪನಿಯ ವಿರುದ್ಧ ಕೇಳಿಬಂದಿದೆ. ಒಟ್ಟು 300ಕ್ಕೂ ಹೆಚ್ಚು ಜನರಿಗೆ ಸುಮಾರು 200 ಕೋಟಿಗೂ ಅಧಿಕ ಹಣ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಇದೀಗ ಕಂಪನಿ ವಿರುದ್ದ ಪ್ರಕರಣ ದಾಖಲಾಗಿದೆ.
ಲಾಭ ಕಡಿಮೆ ಎಂಬ ಕಾರಣಕ್ಕೆ ಮನೆಗಳನ್ನು ಲೀಸ್‌ಗೆ ನೀಡುವವರ ಸಂಖ್ಯೆ ಕುಸಿದಿದ್ದು, ಮನೆ ಮಾಲೀಕರು ಹೆಚ್ಚು ಬಾಡಿಗೆ ಮಾದರಿಯತ್ತ ಮುಖ ಮಾಡಿದ್ದಾರೆ. ಇದೇ ಪರಿಸ್ಥಿತಿಯನ್ನು ಬಳಸಿಕೊಂಡ ಕಂಪನಿ, ಬಾಡಿಗೆ ಕಟ್ಟಲು ಕಷ್ಟಪಡುತ್ತಿದ್ದ ಜನರನ್ನು ಟಾರ್ಗೆಟ್ ಮಾಡಿತ್ತೆಂದು ಹೇಳಲಾಗುತ್ತಿದೆ. ಲೀಸ್‌ಗೆ ಮನೆ ಹುಡುಕುತ್ತಿದ್ದವರಿಗೆ “ನಿಮ್ಮ ಲೀಸ್ ಹಣವನ್ನು ನಮ್ಮ ಕಂಪನಿಗೆ ನೀಡಿ, ಪ್ರತಿ ಮಾಸವೂ ನಾವು ಮನೆ ಬಾಡಿಗೆಯನ್ನು ಕಟ್ಟುತ್ತೇವೆ. ನಿಮ್ಮ ಹಣವೂ ಸುರಕ್ಷಿತವಾಗಿರುತ್ತದೆ” ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದೆ ಎನ್ನಲಾಗಿದೆ. ಒಬ್ಬೊಬ್ಬರಿಂದ ತಲಾ 10 ಲಕ್ಷದಿಂದ 75 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಕಂಪನಿ ಹಾಗೂ ಗ್ರಾಹಕರ ನಡುವೆ ಲೀಸ್ ಅಗ್ರಿಮೆಂಟ್ ಮಾಡಲಾಗುತ್ತಿತ್ತು. ಮತ್ತೊಂದೆಡೆ ಮನೆ ಮಾಲೀಕರ ಜೊತೆ ರೆಂಟಲ್ ಅಗ್ರಿಮೆಂಟ್ ಕೂಡ ಮಾಡಿಕೊಡಲಾಗುತ್ತಿತ್ತು. ಆರಂಭದ ಕೆಲವು ತಿಂಗಳು ಬಾಡಿಗೆ ಹಣವನ್ನು ಸರಿಯಾಗಿ ಪಾವತಿಸಿ ವಿಶ್ವಾಸ ಗಳಿಸಿದ್ದ ಕಂಪನಿ, ಬಳಿಕ ಏಕಾಏಕಿ ಹಣ ಪಾವತಿ ನಿಲ್ಲಿಸಿ ಗ್ರಾಹಕರಿಗೆ ಶಾಕ್ ನೀಡಿದೆ ಎಂದು ದೂರಲಾಗಿದೆ. ಇದೇ ವೇಳೆ ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ ಹಿನ್ನೆಲೆ ಮಹಿಳೆಯೊಬ್ಬರು ತಮ್ಮ ಲೀಸ್ ಹಣವನ್ನು ವಾಪಸ್ ಕೇಳಲು ಕಂಪನಿಗೆ ತೆರಳಿದ್ದರು. ಆಗ “ಹಣ ಈಗ ಕೊಡಲು ಆಗುವುದಿಲ್ಲ, ಆದರೆ ಅದನ್ನೇ ನಮ್ಮ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿ, ತಿಂಗಳಿಗೆ ನಿಗದಿತ ಮೊತ್ತ ನೀಡುತ್ತೇವೆ” ಎಂದು ಮತ್ತೊಮ್ಮೆ ನಂಬಿಸಿದ್ದರಂತೆ. ಕಂಪನಿಯ ಮಾತು ನಂಬಿದ ಮಹಿಳೆ ಲೀಸ್ ಹಣವನ್ನೇ ಇನ್ವೆಸ್ಟ್‌ಮೆಂಟ್ ಆಗಿ ಪರಿವರ್ತಿಸಿಕೊಂಡಿದ್ದರು.
ಆರಂಭದಲ್ಲಿ ಎರಡು ತಿಂಗಳು ಹಣ ಪಾವತಿಸಿದ ಕಂಪನಿ ನಂತರ ಯಾವುದೇ ಹಣ ನೀಡಿಲ್ಲ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಹಲವರ ಲೀಸ್ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಕಂಪನಿ ಕಚೇರಿ ಮುಚ್ಚಿ ಮಾಲೀಕ ಸ್ಟೀಫನ್ ಅರ್ಥರ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಕೂಡ ಸ್ಟೀಫನ್ ಅರ್ಥರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ಫ್ರಾಡ್ ಕೇಸ್‌ನಲ್ಲಿ ಬಂಧಿಸಿದ್ದರೆಂಬ ಮಾಹಿತಿಯೂ ಹೊರಬಂದಿದೆ.
ಹಳೆ ಗ್ರಾಹಕರಿಗೆ ಹೊಸ ಗ್ರಾಹಕರ ಹಣವನ್ನು ಸೆಟಲ್ ಮಾಡಿ ಕಂಪನಿ ನಡೆಸಲಾಗುತ್ತಿತ್ತು ಎಂಬ ಅನುಮಾನವೂ ವ್ಯಕ್ತವಾಗಿದ್ದು, ಇದೀಗ ಕಂಪನಿಯ ವಿರುದ್ಧ ಹಲವು ಮಂದಿ ದೂರು ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಉಡುಪಿ ಎಸ್ಪಿ ಹರಿರಾಂ ಶಂಕರ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ – ಸಾರ್ವಜನಿಕರು ಎಚ್ಚರ ವಹಿಸಲು ಮನವಿ!



















