ನ್ಯೂಯಾರ್ಕ್: ಸುಳ್ಳು ಕೊಲೆ ಪ್ರಕರಣದಲ್ಲಿ 43 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿ ಇತ್ತೀಚೆಗೆ ದೋಷಮುಕ್ತರಾಗಿದ್ದ ಭಾರತ ಮೂಲದ ಸುಬ್ರಮಣ್ಯಂ ‘ಸುಬು’ ವೇದಂ ಅವರ ಗಡಿಪಾರಿಗೆ ಅಮೆರಿಕದ ಎರಡು ನ್ಯಾಯಾಲಯಗಳು ತಡೆ ನೀಡಿವೆ. ಈ ಮೂಲಕ, ದಶಕಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ವ್ಯಕ್ತಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
64 ವರ್ಷದ ವೇದಂ, ಕೇವಲ 9 ತಿಂಗಳ ಮಗುವಾಗಿದ್ದಾಗ ಅಮೆರಿಕಕ್ಕೆ ಬಂದಿದ್ದರು. 1980ರಲ್ಲಿ ತಮ್ಮ ಸ್ನೇಹಿತ ಥಾಮಸ್ ಕಿನ್ಸರ್‌ನನ್ನು ಕೊಂದ ಆರೋಪದ ಮೇಲೆ 1982ರಲ್ಲಿ ಅವರನ್ನು ಬಂಧಿಸಲಾಗಿತ್ತು. ಯಾವುದೇ ಸಾಕ್ಷಿಗಳಿಲ್ಲದೆ, ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ 1983ರಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ದಶಕಗಳ ನಂತರ ಸಿಕ್ಕ ನ್ಯಾಯ
ವರ್ಷಗಳ ಕಾಲ ವೇದಂ ಕುಟುಂಬವು ಅವರ ನಿರಪರಾಧಿತ್ವವನ್ನು ಸಾಬೀತುಪಡಿಸಲು ಹೋರಾಡುತ್ತಲೇ ಇತ್ತು. ಜೈಲಿನಲ್ಲಿದ್ದಾಗ ವೇದಂ ಮೂರು ಪದವಿಗಳನ್ನು ಪಡೆದು, ಶಿಕ್ಷಕರಾಗಿ ಅನೇಕ ಕೈದಿಗಳಿಗೆ ಮಾರ್ಗದರ್ಶಕರಾಗಿದ್ದರು. ಇತ್ತೀಚೆಗೆ, ದಶಕಗಳ ಕಾಲ ಪ್ರಾಸಿಕ್ಯೂಟರ್‌ಗಳು ಮುಚ್ಚಿಟ್ಟಿದ್ದ ಬ್ಯಾಲಿಸ್ಟಿಕ್ಸ್ ಸಾಕ್ಷ್ಯವನ್ನು ವೇದಂ ಪರ ವಕೀಲರು ಪತ್ತೆ ಹಚ್ಚಿದರು. ಇದರ ಆಧಾರದ ಮೇಲೆ, ಕಳೆದ ಆಗಸ್ಟ್‌ನಲ್ಲಿ ಪೆನ್ಸಿಲ್ವೇನಿಯಾ ನ್ಯಾಯಾಲಯವು ಅವರ ಶಿಕ್ಷೆಯನ್ನು ರದ್ದುಗೊಳಿಸಿತು.
ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಬಂಧ
ಅಕ್ಟೋಬರ್ 3 ರಂದು ಜೈಲಿನಿಂದ ಬಿಡುಗಡೆಯಾದ ವೇದಂ ಅವರನ್ನು, ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ತಕ್ಷಣವೇ ಬಂಧಿಸಿದರು. 1982ರಲ್ಲಿ ಅವರ ಮೇಲೆ ದಾಖಲಾಗಿದ್ದ ಸಣ್ಣ ಡ್ರಗ್ಸ್ ಪ್ರಕರಣವನ್ನು ಮುಂದಿಟ್ಟುಕೊಂಡು ಅವರನ್ನು ಗಡಿಪಾರು ಮಾಡಲು ಐಸಿಇ ಮುಂದಾಗಿತ್ತು. ಕೊಲೆ ಪ್ರಕರಣ ರದ್ದಾದರೂ, ಡ್ರಗ್ಸ್ ಪ್ರಕರಣ ರದ್ದಾಗುವುದಿಲ್ಲ ಎಂದು ಗೃಹ ಭದ್ರತಾ ಇಲಾಖೆ ವಾದಿಸಿತ್ತು.
ಇದೀಗ ವಲಸೆ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯವು ಗಡಿಪಾರಿಗೆ ತಡೆ ನೀಡಿದ್ದು, ವಲಸೆ ಮೇಲ್ಮನವಿ ಬ್ಯೂರೋ ಅವರ ಪ್ರಕರಣವನ್ನು ಪರಿಶೀಲಿಸುವವರೆಗೆ ಈ ತಡೆ ಮುಂದುವರಿಯಲಿದೆ. 43 ವರ್ಷಗಳ ಕಾಲ ಸುಳ್ಳು ಕೇಸ್‌ನಲ್ಲಿ ಜೈಲುವಾಸ ಅನುಭವಿಸಿದ ಅನ್ಯಾಯದ ಮುಂದೆ, ಹಳೆಯ ಡ್ರಗ್ಸ್ ಪ್ರಕರಣವು ನಗಣ್ಯ ಎಂದು ವೇದಂ ಅವರ ಸಹೋದರಿ ಮತ್ತು ವಕೀಲರು ವಾದಿಸುತ್ತಿದ್ದಾರೆ.
ಇದನ್ನೂ ಓದಿ: ಅಭಿಮಾನಿಗೆ ಸಾರ್ವಜನಿಕವಾಗಿ ಅವಮಾನ: ಇಳಯರಾಜ ಸಹೋದರ ಗಂಗೈ ಅಮರನ್ ವಿರುದ್ಧ ನೆಟ್ಟಿಗರ ಆಕ್ರೋಶ



















