ಬೆಂಗಳೂರು | ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಬಳಿಕ ದೇಶಾದ್ಯಂತ ಚರ್ಚೆ ಸೃಷ್ಟಿಯಾಗಿದ್ದು, ವಿವಾದದ ಕೇಂದ್ರಬಿಂದು ಆಗಿದೆ. ಟೀಸರ್‌ನಲ್ಲಿರುವ ಕೆಲ ದೃಶ್ಯಗಳು ಅಶ್ಲೀಲವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬ ಆರೋಪದೊಂದಿಗೆ AAP ಪಕ್ಷದ ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗಕ್ಕೆ ನಿನ್ನೆ ಅಧಿಕೃತ ದೂರು ದಾಖಲಿಸಿದೆ.

ಇದೀಗ ಈ ದೂರಿನ ಬಗ್ಗೆ ರಾಜ್ಯ ಮಹಿಳಾ ಆಯೋಗವು ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ (ಸೆನ್ಸಾರ್) ಮಂಡಳಿಗೆ ಪತ್ರ ಬರೆದಿದ್ದು, ‘ಟಾಕ್ಸಿಕ್’ ಚಿತ್ರದ ಟೀಸರ್ ಕುರಿತು ಆಮ್ ಆದ್ಮಿ ಪಕ್ಷ ಸಲ್ಲಿಸಿರುವ ದೂರಿನ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ವರದಿಯನ್ನು ಶೀಘ್ರವೇ ಆಯೋಗಕ್ಕೆ ಕಳುಹಿಸಿ ಕೊಡುವಂತೆ ಕೋರಿದೆ.

ಆಮ್ ಆದ್ಮಿ ಪಕ್ಷವು ನಿನ್ನೆ ಬೆಂಗಳೂರಿನಲ್ಲಿರುವ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ತೆರಳಿ ಟಾಕ್ಸಿಕ್ ಟೀಸರ್‌ನಲ್ಲಿನ ವಿವಾದಾಸ್ಪದ ದೃಶ್ಯಗಳನ್ನು ತಕ್ಷಣ ತೆಗೆದುಹಾಕಬೇಕು, ಟೀಸರ್ ಕನ್ನಡ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ, ರಾಜ್ಯ ಸರ್ಕಾರ ಟೀಸರ್ ರದ್ದುಪಡಿಸುವಂತೆ ನಿರ್ದೇಶನ ನೀಡಬೇಕು ಹಾಗೂ ಸೆನ್ಸಾರ್ ಮಂಡಳಿ ಕಡ್ಡಾಯವಾಗಿ ಈ ವಿಷಯವನ್ನು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರ ಗೈರಿನಲ್ಲಿ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ಸಲ್ಲಿಸಿತ್ತು.
ಇದನ್ನೂ ಓದಿ : ಧರ್ಮಸ್ಥಳ 74 ಅಸಹಜ ಸಾವು ಪ್ರಕರಣ | ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ



















