ಕಲಬುರಗಿ:ಚುನಾವಣಾ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಅಕ್ರಮ ಹಾಗೂ ಅವ್ಯವಹಾರ ನಡೆದಿದೆ ಎಂದು ಸಣ್ಣ ನೀರಾವರಿ ಸಚಿವ ಡಾ. ಅಜಯ್ ಸಿಂಗ್ ಕಲಬುರಗಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ರಕ್ಷಣೆ ಇದ್ದು, 2024ರ ನಂತರ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ವಿವಿಧ ರಾಜ್ಯಗಳಲ್ಲಿ ಅಕ್ರಮ ಎಸಗಿದೆ ಎಂದು ದೂರಿದ್ದಾರೆ. ಈ ಹಿಂದೆ ಶೇ. 20 ರಷ್ಟು ಜನ ಮಾತ್ರ ಅಕ್ರಮವನ್ನು ನಂಬಿದ್ದರು. ಆದರೆ ಈಗ ಇಡೀ ದೇಶದ ಜನರೇ ಇದನ್ನು ನಂಬುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಚುನಾವಣಾ ಅಕ್ರಮಗಳನ್ನು ವಿರೋಧಿಸಿ ಮತ್ತು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸತತ ಹೋರಾಟ ನಡೆಸುತ್ತಿದೆ. ಇದರ ಭಾಗವಾಗಿ ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರಾಷ್ಟ್ರಮಟ್ಟದ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿವಿಧ ರಾಜ್ಯಗಳ ಹಳ್ಳಿ ಹಳ್ಳಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಅಜಯ್ ಸಿಂಗ್ ತಿಳಿಸಿದ್ದಾರೆ.

















