ಬೆಂಗಳೂರು : ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು, ಬಿಜೆಪಿಯವರದ್ದು ಬರೀ ಒಂದು ದಿನದ ನಾಟಕ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರ ಮೆಟ್ರೋ ಪ್ರಯಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಬರೀ ನಾಟಕ. ದಿನ ಮೆಟ್ರೋ ಹತ್ತಿದ್ರೆ ನಾವೂ ಒಪ್ತೀವಿ. ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಇದೆಲ್ಲ ಒಂದು ದಿನದ ನಾಟಕ ಅಷ್ಟೇ ಬಿಜೆಪಿಯವರದ್ದು. ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ. ಅವರು ನಮ್ಮ ಶಕ್ತಿ ಯೋಜನೆ ಪ್ರಯೋಜನ ಪಡೆದುಕೊಳ್ಳಲಿ. ಪ್ರಶ್ನೆ ಇರೋದು ವಿಜಯೇಂದ್ರ ಮೆಟ್ರೋ ಹತ್ತುವಂತೆ ಮಾಡಿದ್ಯಾರು? ವಿಜಯೇಂದ್ರ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು? ಹಾಗೆ ಮಾಡಿದವರು ಯಾರು? ಇದಕ್ಕೆ ಉತ್ತರ ಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ.
ಎಸ್‌ಐಆರ್ ವಿಚಾರವಾಗಿ ಮಾತನಾಡಿ, ಎಸ್‌ಐಆರ್ ಅನ್ನೋದು ಬಿಜೆಪಿ ಗೆಲ್ಲಿಸಲೆಂದೇ ಮಾಡಿರೋ ಡಿಸೈನ್. ಇದೊಂದು ಸಂಪೂರ್ಣ ಅಸಂವಿಧಾನಾತ್ಮಕ. ಎಸ್‌ಐಆರ್ ಬೇಡ ಅಂತಿಲ್ಲ, ಸರಿಯಾಗಿ ಮಾಡಿ ಅಂತಿದ್ದೇವೆ. ಉದಾಹರಣೆಗೆ ನನ್ನ ಹೆಸರು ಪ್ರಿಯಾಂಕ್. ಈ ಹೆಸರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವೋಟ್ ಡಿಲೀಟ್ ಆಗಲಿದೆ. ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ವೋಟ್ ಡಿಲೀಟ್ ಆಗಿದೆ. ಬಹುತೇಕ ಜನರನ್ನು ಮತದಿಂದ ದೂರ ಇಟ್ಟಂತೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಆರ್ಥಿಕ ನೀತಿ ಕುರಿತು ಪ್ರತಿಕ್ರಿಯಿಸಿ, ಕೇಂದ್ರದ ಆರ್ಥಿಕ ನೀತಿಯಿಂದ ಏನಾಗಿದೆ? ಕಾಂಗ್ರೆಸ್‌ನವರು ಬಂದರೆ ಮಂಗಳಸೂತ್ರ ಕಸಿದುಕೊಳ್ತಾರೆ ಅಂತಾ ಮೋದಿ ಅವರು ಭಾಷಣ ಮಾಡಿದ್ರು. ಈಗ ಅವರು ಮಾಡ್ತಿರೋದೇನು? ಚಿನ್ನ ಖರೀದಿ ಮಾಡಬೇಡಿ ಅಂತಿದಾರೆ. ಆರ್ಥಿಕ ನೀತಿ ಚೆನ್ನಾಗಿದೆ ಅನ್ನೋದಾದರೆ ಮೊದಲು ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : “ಕ್ಯಾಮೆರಾಗಳ ಕಾಟ ಸಾಕು” : IPL ‘ಕಂಟೆಂಟ್ ಸಂಸ್ಕೃತಿ’ ವಿರುದ್ಧ ಕಿಡಿಕಾರಿದ ವಿರಾಟ್ ಕೊಹ್ಲಿ



















