ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಉತ್ತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ನಾಗಭೂಷಣ್ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದು, ಲಂಚದ ಹಣ ಪಡೆಯುತ್ತಿದ್ದ ನಾಗಭೂಷಣ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ಅಪಾರ್ಟ್‌ಮೆಂಟ್ ಒಂದರ ಕಾಮಗಾರಿ ವೇಳೆ ಅಕ್ರಮ ನಿರ್ಮಾಣ ನಡೆದಿದೆ ಎಂದು ನೋಟಿಸ್ ನೀಡಿದ್ದ ನಾಗಭೂಷಣ್, ಅದನ್ನು ತೆರವುಗೊಳಿಸಲು ಹಾಗೂ ಪ್ರಕರಣವನ್ನು ಕ್ಲಿಯರ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ನಾಗಭೂಷಣ್ ಹಾಗೂ ಅವರ ಸಹಚರರು ಒಟ್ಟು ₹3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ₹2 ಲಕ್ಷ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಣ್ಣದ ಹಣದ ಸಮೇತ ಅವರನ್ನು ವಶಕ್ಕೆ ಪಡೆದಿದ್ದಾರೆ.
ನಾಗಭೂಷಣ್ ಜೊತೆಗೆ ಪ್ರವೀಣ್ ಮತ್ತು ಮನ್ಸೂರ್ ಅಲಿ ಖಾನ್ ಎಂಬವರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಲಂಚದ ಬೇಡಿಕೆ ಹಾಗೂ ಹಣದ ವ್ಯವಹಾರದ ಕುರಿತು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ನೀಟ್ ಹಗರಣ ಖಂಡಿಸಿ ದಿಲ್ಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಪ್ರತಿಭಟನೆ : ಜಂತರ್ ಮಂತರ್‌ನಲ್ಲಿ ಹೈಡ್ರಾಮಾ



















