ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟಕ್ಕೆ ಸೇರುವ ಸಂಭಾವ್ಯ ಸಚಿವರ ಹೆಸರುಗಳು ಇದೀಗ ದೆಹಲಿ ನಾಯಕರ ಕೈಯಲ್ಲಿವೆ ಎನ್ನಲಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲದ ನಡುವೆ ಹಲವು ಶಾಸಕರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಸಚಿವ ಸ್ಥಾನದ ರೇಸ್‌ನಲ್ಲಿ ಅಜಯ್ ಸಿಂಗ್, ಲಕ್ಷ್ಮಣ ಸವದಿ, ಸಿ.ಪಿ. ಯೋಗೇಶ್ವರ್, ಪುಟ್ಟರಂಗಶೆಟ್ಟಿ, ಸಲೀಂ ಅಹ್ಮದ್, ಎಸ್.ಎಸ್. ಮಲ್ಲಿಕಾರ್ಜುನ, ಎನ್. ಚಲುವರಾಯಸ್ವಾಮಿ, ಎಂ. ಕೃಷ್ಣಪ್ಪ, ಮಧು ಬಂಗಾರಪ್ಪ ಹಾಗೂ ರಘುಮೂರ್ತಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಇವರ ಜೊತೆಗೆ ಅಪಾಜಿ ನಾಡಗೌಡ, ಯಶವಂತರಾಯ ಪಾಟೀಲ್, ಬಸವರಾಜ್ ರಾಯ್ ರೆಡ್ಡಿ, ಶ್ರೀನಿವಾಸ್ ಮಾನೆ, ಶಿವರಾಜ್ ತಂಗಡಗಿ ಹಾಗೂ ಸಂತೋಷ್ ಲಾಡ್ ಅವರ ನಡುವೆ ಸಚಿವ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ. ಪ್ರತಿಯೊಬ್ಬರೂ ತಮ್ಮದೇ ಆದ ರಾಜಕೀಯ ಲೆಕ್ಕಾಚಾರ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.
ಇನ್ನು ಅಲ್ಪಸಂಖ್ಯಾತ ಕೋಟಾದಡಿ ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್ ಹಾಗೂ ರಿಜ್ವಾನ್ ಅರ್ಷದ್ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಇವರ ಜೊತೆಗೆ ಆನೇಕಲ್ ಶಿವಣ್ಣ, ನರೇಂದ್ರಸ್ವಾಮಿ, ಎಚ್.ಸಿ. ಮಹದೇವಪ್ಪ, ಅನ್ನಪೂರ್ಣ ತುಕಾರಾಂ, ಬಿ. ನಾಗೇಂದ್ರ, ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ ಹಾಗೂ ಶರತ್ ಬಚ್ಚೇಗೌಡ ಅವರ ಹೆಸರುಗಳೂ ಸಚಿವ ಸ್ಥಾನದ ರೇಸ್‌ನಲ್ಲಿವೆ ಎನ್ನಲಾಗಿದೆ.
ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟಕ್ಕೆ ಯಾರಿಗೆ ಅವಕಾಶ ಸಿಗಲಿದೆ, ಯಾರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎಂಬುದು ಇದೀಗ ದೆಹಲಿ ನಾಯಕರ ನಿರ್ಧಾರದ ಮೇಲೆ ನಿಂತಿದೆ. ಸಂಪುಟ ವಿಸ್ತರಣೆಗೆ ಮುಹೂರ್ತ ಯಾವಾಗ ನಿಗದಿಯಾಗಲಿದೆ ಮತ್ತು ಅಂತಿಮ ಪಟ್ಟಿಯಲ್ಲಿ ಯಾರ ಹೆಸರು ಇರಲಿದೆ ಎಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : ವಿಶ್ವನಾಥ್ ಹುಟ್ಟುಹಬ್ಬಕ್ಕೆ ಸುಧಾಕರ್ ಗೈರು : ಕಮಲ ಪಾಳಯದಲ್ಲಿ ಮತ್ತೆ ಭಿನ್ನಾಭಿಪ್ರಾಯದ ಚರ್ಚೆ!



















