ಬೆಂಗಳೂರು, ಜು. 27 : ರಾಜ್ಯದಲ್ಲಿ ಯುವಜನರಲ್ಲಿ ಎಚ್‌ಐವಿ (HIV) ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಎಚ್‌ಐವಿ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ನಡೆಸಲು ಯೋಜನೆ ರೂಪಿಸಲಾಗಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ವರದಿ ಪ್ರಕಾರ, ದೇಶದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಮಂದಿ ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿದ್ದು, ಅವರಲ್ಲಿ 2.05 ಲಕ್ಷ ಮಂದಿ ಆಂಟಿ ರೆಟ್ರೋ ವೈರಲ್ ಥೆರಪಿ (ART) ಪಡೆಯುತ್ತಿದ್ದಾರೆ. ಇನ್ನೂ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ಇರುವುದೇ ತಿಳಿದಿಲ್ಲ ಎಂಬುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.
ವಿಶೇಷವಾಗಿ 18 ರಿಂದ 35 ವರ್ಷದೊಳಗಿನ ಯುವಜನರಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. 18 ರಿಂದ 25 ವರ್ಷದೊಳಗಿನ ಸುಮಾರು 7 ಸಾವಿರ ಮಂದಿಯಲ್ಲಿ ಈಗಾಗಲೇ ಸೋಂಕು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಆರೋಗ್ಯ ಇಲಾಖೆಯು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಸಹಯೋಗದಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಸಮಗ್ರ ಆರೋಗ್ಯ ಶಿಬಿರಗಳನ್ನು ಆಯೋಜಿಸಲಿದೆ. ಈ ಶಿಬಿರಗಳಲ್ಲಿ ಎಚ್‌ಐವಿ ಕುರಿತು ಜಾಗೃತಿ, ಆಪ್ತ ಸಮಾಲೋಚನೆ ಹಾಗೂ ಉಚಿತ ತಪಾಸಣೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತಗಳು ಈ ಅಭಿಯಾನಕ್ಕೆ ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.
ವಿದ್ಯಾರ್ಥಿಗಳ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ “ನಿಮ್ಮ HIV ಸ್ಥಿತಿ ತಿಳಿದುಕೊಳ್ಳಿ” ಎಂಬ QR ಕೋಡ್ ಆಧಾರಿತ ಸ್ವಯಂ ಅಪಾಯ ಮೌಲ್ಯಮಾಪನ (Self Risk Assessment) ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಅಪಾಯದ ಮಟ್ಟವನ್ನು ಗೌಪ್ಯವಾಗಿ ಪರಿಶೀಲಿಸಿಕೊಳ್ಳಬಹುದು. ಆರೋಗ್ಯ ಇಲಾಖೆಯ ಈ ಅಭಿಯಾನದ ಮುಖ್ಯ ಉದ್ದೇಶ ಯುವಜನರಲ್ಲಿ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದು, ಆರಂಭಿಕ ಹಂತದಲ್ಲೇ ಸೋಂಕು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಹಾಗೂ ಸೋಂಕಿನ ಹರಡುವಿಕೆಯನ್ನು ತಡೆಯುವುದಾಗಿದೆ.
ಇದನ್ನೂ ಓದಿ : ವಿಶ್ವನಾಥ್ ಹುಟ್ಟುಹಬ್ಬಕ್ಕೆ ಸುಧಾಕರ್ ಗೈರು : ಕಮಲ ಪಾಳಯದಲ್ಲಿ ಮತ್ತೆ ಭಿನ್ನಾಭಿಪ್ರಾಯದ ಚರ್ಚೆ!



















