ನವದೆಹಲಿ : ನೀಟ್ (NEET-UG) ಸೇರಿದಂತೆ ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸೋರಿಕೆ ಮತ್ತು ಅಕ್ರಮಗಳನ್ನು ತಡೆಗಟ್ಟಲು, ಹಾಗೂ ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲು ಸಜ್ಜಾಗಿದ್ದು, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದವರು ಇದೀಗ ಜೈಲಿನಲ್ಲಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಈಗಾಗಲೇ ತ್ವರಿತಗತಿ ನ್ಯಾಯಾಲಯಗಳನ್ನು ಪರಿಚಯಿಸಲಾಗಿದೆ. ಇದರ ಜೊತೆಗೆ ಕಠಿಣ ಕಾನೂನು ಒಳಗೊಂಡ ಹೊಸ ಕಾನೂನನ್ನು ಸಂಸತ್ತಿನಲ್ಲಿ ತರಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ದೀರ್ಘಾವಧಿಯ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಪಾರದರ್ಶಕವಾಗಿಸುವತ್ತ ಸರ್ಕಾರ ಗಮನ ಹರಿಸುತ್ತಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಪರೀಕ್ಷಾ ಸುಧಾರಣೆಗಳ ಕುರಿತು ಶಿಫಾರಸುಗಳನ್ನು ಸಲ್ಲಿಸಲು ರಚಿಸಲಾಗಿರುವ ಕಾರ್ಯಪಡೆ ಶೀಘ್ರದಲ್ಲೇ ತನ್ನ ವರದಿ ನೀಡಲಿದೆ. ಕಾರ್ಯಪಡೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಂಡು, ಮುಂಬರುವ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪರೀಕ್ಷೆಗಳಲ್ಲಿ ಸುಧಾರಣೆ ತರಲು ಈ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ. ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡಿರುವ ಈ ಬಹುಶಿಸ್ತೀಯ ಸಮಿತಿ, ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದ ದೃಷ್ಟಿಕೋನದಿಂದ ಎನ್‌ಟಿಎ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್‌ರಚಿಸುವ ಕುರಿತು ಸಲಹೆ ನೀಡಲಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಅಗತ್ಯವಿರುವ ರಚನಾತ್ಮಕ ಸುಧಾರಣೆಗಳ ಕುರಿತೂ ಶಿಫಾರಸುಗಳನ್ನು ಮಾಡಲಿದೆ.
ಉನ್ನತ ಮಟ್ಟದ ಕಾರ್ಯಪಡೆಯ ನೇತೃತ್ವವನ್ನು ತಂತ್ರಜ್ಞಾನ ತಜ್ಞ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ವಹಿಸಲಿದ್ದಾರೆ. ಮಾಜಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಮಾಜಿ ಗುಪ್ತಚರ ದಳದ ನಿರ್ದೇಶಕ ತಪನ್ ದೇಕಾ, ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದ ತಜ್ಞ ಅಮೃತ್ ಲಾಲ್ ಮೀನಾ ಅವರು ಕಾರ್ಯಪಡೆಯ ಸದಸ್ಯರಾಗಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಈ ಮಹತ್ವದ ಕಾರ್ಯಪಡೆ ರಚನೆಯಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಸುಮಾರು ಏಳು ವಾರಗಳ ಕಾಲ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಪ್ರತಿಭಟನೆಗಳ ಬಳಿಕ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೂನ್ 20ರಂದು ಜಂತರ್ ಮಂತರ್‌ನಲ್ಲಿ ಆರಂಭಗೊಂಡಿದ್ದ ವಿದ್ಯಾರ್ಥಿ ಮತ್ತು ಯುವಜನರ ಪ್ರತಿಭಟನೆ ಬಳಿಕ ದೇಶದ ವಿವಿಧ ಭಾಗಗಳಿಗೂ ವಿಸ್ತರಿಸಿತ್ತು. ಜುಲೈ 20ರಂದು ಪ್ರತಿಭಟನಾಕಾರರ ವಿರುದ್ಧ ನಡೆದ ಪೊಲೀಸ್ ಕ್ರಮದ ಬಳಿಕ ಹೋರಾಟ ಮತ್ತಷ್ಟು ತೀವ್ರಗೊಂಡಿತ್ತು. ಹಲವು ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾಮಾಜಿಕ ಹೋರಾಟಗಾರರು ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಈ ಪೈಕಿ ಸೋನಂ ವಾಂಗ್ಚುಕ್ ಕೂಡ ಹೋರಾಟಕ್ಕೆ ಬೆಂಬಲವಾಗಿ ದೀರ್ಘಾವಧಿಯ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಇದರ ನಡುವೆ ಪರೀಕ್ಷಾ ಅಕ್ರಮಗಳ ವಿರುದ್ಧ ಕಾನೂನು ಕ್ರಮವನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ವಿಧಾನಗಳ ತಡೆ) ತಿದ್ದುಪಡಿ ಮಸೂದೆ, 2026 ಅನ್ನು ಜುಲೈ 27ರಂದು ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. 2024ರಲ್ಲಿ ಜಾರಿಗೆ ಬಂದಿದ್ದ ಕಾನೂನನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ತಿದ್ದುಪಡಿ ಮಸೂದೆ ತರಲಾಗುತ್ತಿದೆ.
ಹೊಸ ತಿದ್ದುಪಡಿಗಳ ಮೂಲಕ ಪರೀಕ್ಷಾ ಅಕ್ರಮಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ, ಸಮಯಬದ್ಧ ತನಿಖೆ ಮತ್ತು ವಿಚಾರಣೆ ಹಾಗೂ ವಿಶೇಷ ತ್ವರಿತಗತಿ ನ್ಯಾಯಾಲಯಗಳ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸಂಘಟಿತ ಪರೀಕ್ಷಾ ವಂಚನೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳನ್ನು ತಡೆಯುವುದು, ಹೊಣೆಗಾರಿಕೆಯನ್ನು ಹೆಚ್ಚಿಸುವುದು, ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರಿಗೆ ಕಠಿಣ ಸಂದೇಶ ರವಾನಿಸುವುದು ಮತ್ತು ದೇಶದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳು ಹಾಗೂ ಜನರ ವಿಶ್ವಾಸವನ್ನು ಮರುಸ್ಥಾಪಿಸುವುದು ಈ ಹೊಸ ಕಾನೂನು ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ : 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮ ಅದ್ದೂರಿಯಾಗಿ ಸಂಪನ್ನ



















