ನವದೆಹಲಿ : ಈಗಾಗಲೇ ದೇಶಾದ್ಯಂತ ಹಬ್ಬದ ಋತು ಆರಂಭವಾಗಿದೆ. ಸಾಲು ಸಾಲು ಹಬ್ಬಗಳ ಸಂಭ್ರಮಕ್ಕೆ ಸಿದ್ಧವಾಗುತ್ತಿರುವ ದೇಶವಾಸಿಗಲಿಗೆ ಈಗ ಸಕ್ಕರೆ ದರ ಏರಿಕೆ ದೊಡ್ಡ ಕಹಿ ಸುದ್ದಿ ನೀಡಿದೆ. ಮುಂಬರುವ ಹಬ್ಬದ ದಿನಗಳಲ್ಲಿ ಸಿಹಿ ತಿಂಡಿಗಳು, ಸಾಂಪ್ರದಾಯಿಕ ಅಡುಗೆಗಳ ತಯಾರಿಕೆಗೆ ಸಕ್ಕರೆಯ ಬೇಡಿಕೆ ಹೆಚ್ಚಾಗುವ ಸಮಯದಲ್ಲೇ, ಇತ್ತ ಬೆಲೆಯೂ ಗಗನಕ್ಕೇರಿ, ಸಕ್ಕರೆ ಖರೀದಿಯ ಮೇಲೆಯೂ ನಿರ್ಬಂಧ ಹೇರಲಾಗಿದೆ. ಪ್ರಮುಖ ಕ್ವಿಕ್-ಕಾಮರ್ಸ್ ಆ್ಯಪ್‌ಗಳು ಮತ್ತು ಬೃಹತ್ ಚಿಲ್ಲರೆ ಮಾರಾಟ ಮಳಿಗೆಗಳು ಸಕ್ಕರೆ ಖರೀದಿಗೆ ಗರಿಷ್ಠ ಮಿತಿ (ಕ್ಯಾಪಿಂಗ್) ವಿಧಿಸುವ ಮೂಲಕ ಸಾರ್ವಜನಿಕರಿಗೆ ನಿಯಂತ್ರಣ ಹೇರುತ್ತಿವೆ.
ಆನ್‌ಲೈನ್, ಸೂಪರ್‌ಮಾರ್ಕೆಟ್‌ಗಳಲ್ಲಿ ಸಕ್ಕರೆ ಕೊರತೆ ನಿಯಂತ್ರಣ
ಆನ್‌ಲೈನ್ ಡೆಲಿವರಿ ಸಂಸ್ಥೆಗಳಾದ ಝೆಪ್ಟೋ, ಬ್ಲಿಂಕಿಟ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗಳು ಗ್ರಾಹಕರು ಒಂದೇ ಬಾರಿಗೆ ಖರೀದಿಸಬಹುದಾದ ಸಕ್ಕರೆ ಪ್ಯಾಕೆಟ್‌ಗಳ ಸಂಖ್ಯೆಗೆ ಮಿತಿ ಹೇರಿವೆ. ಉದಾಹರಣೆಗೆ, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಒಬ್ಬ ಗ್ರಾಹಕ ಒಂದು ಆರ್ಡರ್‌ಗೆ ಗರಿಷ್ಠ 2 ಕೆಜಿ (1 ಕೆಜಿಯ ಎರಡು ಪ್ಯಾಕ್) ಸಕ್ಕರೆ ಮಾತ್ರ ಖರೀದಿಸಲು ಅವಕಾಶ ನೀಡಲಾಗುತ್ತಿದೆ. ಇದು ಕೇವಲ ಆನ್‌ಲೈನ್ ಆ್ಯಪ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಮುಖ ಸೂಪರ್ ಮಾರ್ಕೆಟ್‌ಗಳಾದ ಡಿ-ಮಾರ್ಟ್ (DMart) ಮತ್ತು ರಿಲಯನ್ಸ್ ಚಿಲ್ಲರೆ ಮಳಿಗೆಗಳು ಕೂಡ ಪ್ರತಿಯೊಬ್ಬ ಗ್ರಾಹಕನಿಗೆ ಗರಿಷ್ಠ 2 ರಿಂದ 3 ಕೆಜಿ ಸಕ್ಕರೆಯನ್ನು ಮಾತ್ರ ಮಾರಾಟ ಮಾಡುತ್ತಿವೆ.
ದರ ಏರಿಕೆಗೆ ಕಾರಣವೇನು?
ಹಬ್ಬ-ಹರಿದಿನಗಳ ಸಮಯದಲ್ಲಿ ಸಕ್ಕರೆಗೆ ದಿಢೀರ್ ಬೇಡಿಕೆ ಹೆಚ್ಚಾಗುವುದು ಮತ್ತು ಕಾಳಸಂತೆಯಲ್ಲಿ ಸಕ್ಕರೆಯನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದನ್ನು ತಡೆಯಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ, ಸುಂಕ ರಹಿತ ಕಚ್ಚಾ ಸಕ್ಕರೆ ಆಮದಿಗೆ ಸರ್ಕಾರ ವಿಧಿಸಿದ್ದ ನಿಯಮಗಳನ್ನು ಸಡಿಲಗೊಳಿಸಿದೆ. ಅಕ್ಟೋಬರ್ 31ರವರೆಗೆ 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದು, ಆಮದು ಮಾಡಿಕೊಂಡ ಕಚ್ಚಾ ಸಕ್ಕರೆಯನ್ನು ಸಂಸ್ಕರಿಸಿ ಬಿಳಿ/ಶುದ್ಧೀಕರಿಸಿದ ಸಕ್ಕರೆಯನ್ನಾಗಿ ಪರಿವರ್ತಿಸಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶುಲ್ಕ ಸಲ್ಲಿಕೆಯಾದ ದಿನಾಂಕದಿಂದ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.
ಗ್ರಾಹಕರ ಮೇಲಾಗುವ ಪರಿಣಾಮಗಳು
ಸಾಮಾನ್ಯ ದಿನನಿತ್ಯದ ಬಳಕೆಗೆ ಒಂದೆರಡು ಕೆಜಿ ಸಕ್ಕರೆ ಕೊಳ್ಳುವ ಕುಟುಂಬಗಳಿಗೆ ಈ ಮಿತಿ ತಕ್ಷಣಕ್ಕೆ ದೊಡ್ಡ ಸಮಸ್ಯೆ ಎನಿಸದಿರಬಹುದು. ಆದರೆ ಹಬ್ಬದ ಸಿದ್ಧತೆಯಲ್ಲಿರುವ ಕುಟುಂಬಗಳಿಗೆ, ಸಣ್ಣ ಪ್ರಮಾಣದ ಸಿಹಿ ತಿಂಡಿ ತಯಾರಕರಿಗೆ ಹಾಗೂ ಬೇಕರಿ ವ್ಯಾಪಾರಿಗಳಿಗೆ ಈ ನಿರ್ಬಂಧ ದೊಡ್ಡ ಸವಾಲಾಗಿದೆ. ಆಮದು ಮಾಡಿಕೊಂಡ ಸಕ್ಕರೆಯು ಸಂಪೂರ್ಣವಾಗಿ ಮಾರುಕಟ್ಟೆಗೆ ಪೂರೈಕೆಯಾಗಿ ಬೆಲೆಗಳು ಹತೋಟಿಗೆ ಬರಲು ಇನ್ನೂ ಕೆಲವು ವಾರಗಳೇ ಬೇಕಾಗಬಹುದು. ಅಲ್ಲಿಯವರೆಗೆ ಗ್ರಾಹಕರು ಹೆಚ್ಚಿನ ದರ ನೀಡಿಯೂ ನಿಗದಿತ ಪ್ರಮಾಣದ ಸಕ್ಕರೆಯನ್ನು ಮಾತ್ರ ಖರೀದಿಸಬೇಕಾದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ನೇಪಾಳದ ಜಲಪ್ರಳಯಕ್ಕೆ ಭೂಕಂಪ ; ‘ಸಿರ್ಕ್’ ನೀರ್ಗಲ್ಲು ಕುಸಿತವೇ ಕಾರಣ.. ಇಸ್ರೋ ಕೃತಕ ಉಪಗ್ರಹಗಳ ವರದಿ


















