ಬೆಂಗಳೂರು : ರಾಜಧಾನಿಯ ಮಲ್ಲತಹಳ್ಳಿಯಲ್ಲಿರುವ ಪಿಯುಸಿ ಬಾಯ್ಸ್ ಹಾಸ್ಟೆಲ್ (ಶ್ರೀಗಂಧಕಾವಲು) ವಿದ್ಯಾರ್ಥಿಗಳ ಪಾಲಿಗೆ ಜೈಲಿಗಿಂತ ಕಡೆಯಾಗಿದೆ. ಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ವಿದ್ಯಾರ್ಥಿಗಳು, ಕಳಪೆ ಆಹಾರ ಮತ್ತು ಭದ್ರತಾ ಲೋಪದ ವಿರುದ್ಧ ಇದೀಗ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರು ನೀಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಜಿರಳೆ ಮಿಶ್ರಿತ ಆಹಾರ – ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಚೆಲ್ಲಾಟ :
ಹಾಸ್ಟೆಲ್‌ನಲ್ಲಿ ನೀಡಲಾಗುತ್ತಿರುವ ಆಹಾರವು ಅತ್ಯಂತ ಕಳಪೆಯಾಗಿದ್ದು, ಅನ್ನ-ಸಾಂಬಾರ್‌ನಲ್ಲಿ ಜಿರಳೆ ಮತ್ತು ಹುಳುಗಳು ಪತ್ತೆಯಾಗುತ್ತಿವೆ. ಪೌಷ್ಟಿಕಾಂಶವಿಲ್ಲದ ಇಂತಹ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. “ನಮಗೆ ಮನುಷ್ಯರು ತಿನ್ನುವ ಆಹಾರ ಕೊಡುತ್ತಿದ್ದಾರೋ ಅಥವಾ ಪ್ರಾಣಿಗಳಿಗೋ?” ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ಗೆ ಬಂದಿರುವ ವಿದ್ಯಾರ್ಥಿಗಳಿಗೆ ಕಳೆದ ಆರು ತಿಂಗಳಿನಿಂದ ಪಠ್ಯಪುಸ್ತಕಗಳನ್ನೇ ವಿತರಿಸಲಾಗಿಲ್ಲ. ಈ ಬಗ್ಗೆ ವಾರ್ಡನ್ ಅವರಿಗೆ ಮನವಿ ಮಾಡಿದರೆ ಕೇವಲ ಸುಳ್ಳು ಭರವಸೆಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಸ್ಟೆಲ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಇವೆ. ರೆಕಾರ್ಡಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಅಪರಿಚಿತರು ಬೇಕಾಬಿಟ್ಟಿ ಒಳಗೆ ಪ್ರವೇಶಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಸುರಕ್ಷತೆಗೆ ದೊಡ್ಡ ಸವಾಲಾಗಿದೆ.

ವಾರ್ಡನ್ ಗೈರುಹಾಜರಿ ಮತ್ತು ಸಿಬ್ಬಂದಿಯ ಗುಂಡಾವರ್ತನೆ :
ವಾರ್ಡನ್ ವಾರಕ್ಕೆ ಕೇವಲ ಎರಡು ದಿನ ಮಾತ್ರ ಹಾಸ್ಟೆಲ್‌ಗೆ ಮುಖ ತೋರಿಸುತ್ತಿದ್ದಾರೆ. ಇನ್ನು ಅಲ್ಲಿನ ಸಿಬ್ಬಂದಿ ವಿದ್ಯಾರ್ಥಿಗಳ ಸಮಸ್ಯೆ ಕೇಳುವ ಬದಲು ಅಸಭ್ಯವಾಗಿ ವರ್ತಿಸುತ್ತಾ, ಬೆದರಿಕೆ ಹಾಕುತ್ತಿದ್ದಾರೆ. ಕೇಳುವವರಿಲ್ಲದ ಕಾರಣ ಸಿಬ್ಬಂದಿಗಳ ದರ್ಬಾರ್ ಮಿತಿಮೀರಿದೆ ಎಂದು ದೂರಲಾಗಿದೆ. ನಿಯಮದ ಪ್ರಕಾರ ಇರಬೇಕಾದ ವಿದ್ಯಾರ್ಥಿಗಳಿಗಿಂತ ಹೆಚ್ಚಿನವರನ್ನು ಒಂದೇ ಕೊಠಡಿಯಲ್ಲಿ ತುಂಬಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಓದಲು ಸರಿಯಾದ ವಾತಾವರಣವಿಲ್ಲದೆ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತಿದೆ.

ವಿದ್ಯಾರ್ಥಿಗಳ ಆಗ್ರಹ : ಮಹದೇವಸ್ವಾಮಿ, ಅನಿಲ್ ಮಹಾದೇವ,
ವರುಣ್, ಲಿಖಿತ, ವಿಶ್ವ, ಪ್ರಜ್ವಲ್, ಶಿವಕುಮಾರ್, ಶಶಿಕುಮಾರ್, ದರ್ಶನ, ಮಲ್ಲಿಕಾರ್ಜುನ, ನಿಂಗರಾಜ್, ಮಂಚಯ್ಯ, ಹನುಮಂತ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಹಿ ಮಾಡಿದ ದೂರು ಪತ್ರವನ್ನು ಸಲ್ಲಿಸಿದ್ದು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥ ಸಿಬ್ಬಂದಿ ಹಾಗೂ ವಾರ್ಡನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡಿನ ಸಿಎಂ ಆಗಿ ‘ದಳಪತಿ’ ವಿಜಯ್ ಪ್ರಮಾಣ ವಚನ : 9 ಶಾಸಕರಿಗೆ ಒಲಿದ ಸಚಿವ ಸ್ಥಾನ!



















