ನಾಗ್ಪುರ: ದೇಶಾದ್ಯಂತ ಜೂನ್ 21ರ ಭಾನುವಾರ ನಡೆಯಲಿರುವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್ ಯುಜಿ (Re-NEET UG 2026) ಮರುಪರೀಕ್ಷೆಯ ಪ್ರವೇಶ ಪತ್ರದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಮ್ಮೆ ಭಾರೀ ಎಡವಟ್ಟು ಮಾಡಿಕೊಂಡಿದೆ. ಮಹಾರಾಷ್ಟ್ರದ ನಾಗ್ಪುರದ ವಿದ್ಯಾರ್ಥಿಗೆ ಭಾರತದ ಬದಲು ಯುಎಇಯ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗಿದ್ದು, ತಾಂತ್ರಿಕ ದೋಷದಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಎನ್‌ಟಿಎ ಒಪ್ಪಿಕೊಂಡಿದೆ.

ಕಣ್ಣೀರಿಟ್ಟ ವಿದ್ಯಾರ್ಥಿ; ಪಾಸ್‌ಪೋರ್ಟ್ ಕೂಡ ಇಲ್ಲ!
ನಾಗ್ಪುರದ ನಿವಾಸಿಯಾದ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬ ವಿದ್ಯಾರ್ಥಿ ಅಧಿಕೃತ ವೆಬ್‌ಸೈಟ್‌ನಿಂದ ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ತಾವು ಅರ್ಜಿ ಸಲ್ಲಿಸುವಾಗ ನಾಗ್ಪುರ, ವರ್ಧಾ ಮತ್ತು ಭಂಡಾರಾವನ್ನು ಆದ್ಯತೆಯ ನಗರಗಳಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ವಿದ್ಯಾರ್ಥಿಯ ಕುಟುಂಬ ತಿಳಿಸಿದೆ. ಆದರೆ, ಪ್ರವೇಶ ಪತ್ರದಲ್ಲಿ ಅಬುಧಾಬಿಯ ಭಾರತೀಯ ಶಾಲೆಯೊಂದರ ವಿಳಾಸವಿತ್ತು. ವಿದ್ಯಾರ್ಥಿಯ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲದ ಕಾರಣ ಪರೀಕ್ಷೆ ಬರೆಯುವುದು ಹೇಗೆ ಎಂಬ ಆತಂಕ ಎದುರಾಗಿತ್ತು. “ಪ್ರವೇಶ ಪತ್ರ ನೋಡಿದ ತಕ್ಷಣ ನನ್ನ ಮಗ ಅಳಲು ಪ್ರಾರಂಭಿಸಿದ, ನಾವೆಲ್ಲರೂ ದಿಗ್ಭ್ರಮೆಗೊಂಡಿದ್ದೆವು” ಎಂದು ವಿದ್ಯಾರ್ಥಿಯ ತಂದೆ ಡಾ. ಮೊಹಮ್ಮದ್ ತಾಲಿಬ್ ಬೇಸರ ವ್ಯಕ್ತಪಡಿಸಿದ್ದಾರೆ.
ದೋಷ ಒಪ್ಪಿಕೊಂಡ ಎನ್‌ಟಿಎ: ತಿದ್ದುಪಡಿ ಭರವಸೆ
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರವೇಶ ಪತ್ರದ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದ್ದಂತೆ ಹಾಗೂ ಮಾಧ್ಯಮಗಳು ಈ ವರದಿಯನ್ನು ಬಿತ್ತರಿಸಿದ ಬೆನ್ನಲ್ಲೇ ಎನ್‌ಟಿಎ ಎಚ್ಚೆತ್ತುಕೊಂಡಿದೆ. ಇದೊಂದು ತಾಂತ್ರಿಕ ದೋಷ ಎಂದು ಒಪ್ಪಿಕೊಂಡಿರುವ ಸಂಸ್ಥೆಯು, ವಿದ್ಯಾರ್ಥಿಯ ದೂರನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿ, ವಿದ್ಯಾರ್ಥಿಗೆ ನಾಗ್ಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಮರು-ಹಂಚಿಕೆ ಮಾಡಿ ಹೊಸ ಪ್ರವೇಶ ಪತ್ರವನ್ನು ನೀಡುವುದಾಗಿ ಎನ್‌ಟಿಎ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ನಾಳೆಯೇ ಮರು-ಪರೀಕ್ಷೆ
ನಾಳೆ (ಜೂನ್ 21) ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 5:15 ರವರೆಗೆ ದೇಶಾದ್ಯಂತ ಪೆನ್ ಮತ್ತು ಪೇಪರ್ ಮಾದರಿಯಲ್ಲಿ ಮರು-ನೀಟ್ ಪರೀಕ್ಷೆ ನಡೆಯಲಿದೆ. ಇತರ ಯಾವುದೇ ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲಿ ಇಂತಹ ದೋಷಗಳಿದ್ದಲ್ಲಿ ತಕ್ಷಣವೇ ಎನ್‌ಟಿಎ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪರಿಷ್ಕೃತ ಪ್ರವೇಶ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕಾಗಿ ವಿನಂತಿಸಲಾಗಿದೆ. ಈ ಹಿಂದೆ ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಆ ಪರೀಕ್ಷೆಯನ್ನು ರದ್ದು ಮಾಡಿ ಮರುಪರೀಕ್ಷೆ ನಿಗದಿ ಮಾಡಲಾಗಿದೆ. ಅದರಂತೆ ಅತ್ಯಂಕ ಕಟ್ಟುನಿಟ್ಟಿನ ವ್ಯವಸ್ಥೆಯೊಂದಿಗೆ ಯಾವುದೇ ಲೋಪಗಳು, ತಪ್ಪುಗಳು ಆಗದಂತೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಭಾನುವಾರ ಮರುಪರೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ.



















