ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್ಒ) ಸಂಬಂಧಿಸಿದಂತೆ ಖಾಸಗಿ ಕ್ಷೇತ್ರ ಹಾಗೂ ಸಂಘಟಿತ ವಲಯದ ಉದ್ಯೋಗಿಗಳಿಗೆ ಗುಡ್ ನ್ಯೂಸ್ ದೊರೆತಿದೆ. ಇಪಿಎಫ್ (ಇಪಿಎಫ್) ಕಡ್ಡಾಯ ವ್ಯಾಪ್ತಿಗೆ ವಿಧಿಸಲಾಗುವ ಮಾಸಿಕ ಮೂಲ ವೇತನ ಮಿತಿಯನ್ನು ಪ್ರಸ್ತುತವಿರುವ ಈಗಿನ 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಗೆ ಹಣಕಾಸು ಸಚಿವಾಲಯವು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದ ಅಂತಿಮ ಒಪ್ಪಿಗೆ ಸಿಗಬೇಕಿದೆ. ಇದು ಜಾರಿಗೆ ಬಂದರೆ, 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಬೇಸಿಕ್ ಸಂಬಳ ಹೊಂದಿರುವ ನೌಕರರಿಗೂ ಇಪಿಎಫ್ ಮತ್ತು ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಫ್) ಕಡ್ಡಾಯವಾಗಲಿದೆ. ಈ ಹಿಂದೆ 2014ರ ಸೆಪ್ಟೆಂಬರ್ ನಲ್ಲಿ ವೇತನ ಮಿತಿಯನ್ನು 6,500 ರೂ.ನಿಂದ 15 ಸಾವಿರ ರೂ.ಗೆ ಏರಿಸಲಾಗಿತ್ತು.
ಈ ಹೊಸ ಬದಲಾವಣೆಯಿಂದಾಗಿ ಭಾರತದ ಔಪಚಾರಿಕ ವಲಯದ ಹೆಚ್ಚಿನ ನೌಕರರಿಗೆ ಸಾಮಾಜಿಕ ಭದ್ರತೆ ಹಾಗೂ ನಿವೃತ್ತಿ ವೇತನದ ಲಾಭ ಸಿಗಲಿದೆ. ಆದರೆ, ಇದರೊಂದಿಗೆ ಉದ್ಯೋಗದಾತ ಕಂಪನಿಗಳ ಮೇಲೆಯೂ ಹೆಚ್ಚಿನ ಆರ್ಥಿಕ ಹೊರೆ ಹಾಗೂ ಜವಾಬ್ದಾರಿ ಹೆಚ್ಚಾಗಲಿದೆ. ಕಂಪನಿಗಳು ಹೆಚ್ಚಿನ ನೌಕರರ ಪಿಎಫ್ ಮತ್ತು ಪಿಂಚಣಿ ಖಾತೆಗಳಿಗೆ ಕಡ್ಡಾಯವಾಗಿ ಕೊಡುಗೆ ನೀಡಬೇಕಾಗುತ್ತದೆ.
ಕೇಂದ್ರ ಸರ್ಕಾರದ ನೌಕರರಿಗೆ ಪ್ರತ್ಯೇಕ ಪಿಂಚಣಿ ವ್ಯವಸ್ಥೆ ಇರುವುದರಿಂದ ಅವರಿಗೆ ಈ ನಿಯಮ ಅನ್ವಯಿಸುವುದಿಲ್ಲ. 20 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಇದು ಕಡ್ಡಾಯವಾಗಿದೆ. ಸಚಿವ ಸಂಪುಟದ ಅನುಮೋದನೆಯ ಬಳಿಕ, ಕಂಪನಿಗಳು ತಮ್ಮ ವೇತನ ಪಟ್ಟಿ ಮತ್ತು ವ್ಯವಸ್ಥೆಗಳನ್ನು ನವೀಕರಿಸಿಕೊಳ್ಳಲು ಕಾಲಾವಕಾಶ ಬೇಕಿರುವುದರಿಂದ, ಇದು 2027ರ ಏಪ್ರಿಲ್ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ಈ ನಿರ್ಧಾರದಿಂದ ಕೋಟ್ಯಂತರ ಖಾಸಗಿ ನೌಕರರಿಗೆ ಹೆಚ್ಚಿನ ಪಿಂಚಣಿ ಮತ್ತು ಭವಿಷ್ಯ ನಿಧಿ ಸೌಲಭ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಐಟಿಐ ಮುಗಿಸಿದವರಿಗೆ ಶುಭ ಸುದ್ದಿ : ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ನೇಮಕಾತಿ!



















