ಪಾಟ್ನಾ : ಉತ್ತರ ಭಾರತದಲ್ಲಿ ಇಂದು ಶ್ರಾವಣ ಮಾಸದ ಮೂರನೇ ಸೋಮವಾರವಾಗಿದ್ದು, ಈ ಶುಭ ಸಂದರ್ಭದಲ್ಲಿ ಬಿಹಾರದ ಲಖೀಸರಾಯ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಅಶೋಕ ಧಾಮ ದೇವಾಲಯದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದ ಕಾರಣ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 7 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಗಿದ್ದೇನು?
ಇಂದು ಬೆಳಗಿನ ಜಾವ ದೇವಾಲಯದ ಆವರಣದಲ್ಲಿ ಸಾವಿರಾರು ಭಕ್ತರು ಜಮಾಯಿಸಿದ್ದರು. ಬೆಳಿಗ್ಗೆ 6.30 ರಿಂದ 6.45 ರ ಸುಮಾರಿಗೆ ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ಎರಡು ರೈಲುಗಳು ಆಗಮಿಸಿದ ಪರಿಣಾಮ, ಏಕಾಏಕಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಯಿತು. ಬೃಹತ್ ಪ್ರಮಾಣದ ಜನಸ್ತೋಮದ ಒತ್ತಡ ತಾಳಲಾರದೆ ಪುರುಷರ ಸಾಲಿನಲ್ಲಿದ್ದ ಬ್ಯಾರಿಕೇಡ್‌ಗಳು ಕುಸಿದುಬಿದ್ದವು. ಇದೇ ವೇಳೆ ವಿದ್ಯುತ್ ಕಂಬವೊಂದು ಬಿದ್ದಾಗ, ವಿದ್ಯುತ್ ತಂತಿ ತಗಲಿದೆಯೆಂಬ ವದಂತಿ ಹಬ್ಬಿ ಭಕ್ತರಲ್ಲಿ ತೀವ್ರ ಭಯ ಆವರಿಸಿತು.

ಪರಿಣಾಮವಾಗಿ, ನಿಯಂತ್ರಣ ಕಳೆದುಕೊಂಡ ಜನರು ಪಕ್ಕದಲ್ಲಿದ್ದ ಮಹಿಳೆಯರ ಸಾಲಿನತ್ತ ಓಡಲಾರಂಭಿಸಿದರು. ಈ ಗೊಂದಲದ ವಾತಾವರಣದಲ್ಲಿ ಅನೇಕರು ಒಬ್ಬರ ಮೇಲೊಬ್ಬರು ಬಿದ್ದು ದುರಂತ ಸಂಭವಿಸಿತು. ಘಟನೆ ನಡೆದ ತಕ್ಷಣವೇ ಪೊಲೀಸ್ ಪಡೆಗಳು ಮತ್ತು ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಗಾಯಗೊಂಡ ಭಕ್ತಾದಿಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ತಕ್ಷಣವೇ ಉಚಿತ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಿದ್ದಾರೆ.
ಶ್ರೀ ಇಂದ್ರದಮನೇಶ್ವರ ಮಹಾದೇವ ದೇವಾಲಯ ಎಂದೂ ಕರೆಯಲ್ಪಡುವ ಅಶೋಕ ಧಾಮವು ಬೃಹತ್ ಶಿವಲಿಂಗಕ್ಕೆ ಪ್ರಸಿದ್ಧಿಯಾಗಿದ್ದು, ಶ್ರಾವಣ ಮಾಸದಲ್ಲಿ ನಿರಂತರವಾಗಿ ಭಕ್ತರನ್ನು ಆಕರ್ಷಿಸುತ್ತದೆ. ಭದ್ರತಾ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದ್ದರೂ ಸಹ ಕೇವಲ ಎರಡು ನಿಮಿಷಗಳ ಅವಧಿಯಲ್ಲಿ ಈ ಅನಿರೀಕ್ಷಿತ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ NALನಲ್ಲಿ 6 ಹುದ್ದೆಗಳ ನೇಮಕಾತಿ : 56 ಸಾವಿರ ರೂ. ಸ್ಯಾಲರಿ



















