ಬೆಂಗಳೂರು : ಚಿಕ್ಕಬಾಣವಾರದ ಗುಡ್ಡೆಬಸವಪುರದಲ್ಲಿ ತಂದೆ-ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಅಭಿನವ್ (38) ಹಾಗೂ ಅವರ ಐದು ವರ್ಷದ ಪುತ್ರ ಯದುವೀರ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಇಬ್ಬರೂ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹಗಳ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ.
ಮನೆಯಲ್ಲಿ ಅಭಿನವ್ ಅವರ ಪತ್ನಿ ಹರಿಣಿ ಕೂಡ ಇದ್ದರು ಎನ್ನಲಾಗಿದೆ. ಘಟನೆ ನಡೆದ ವೇಳೆ ಅವರು ಮನೆಯ ರೂಂನಲ್ಲಿ ಮಲಗಿದ್ದರು ಎಂದು ತಿಳಿದುಬಂದಿದೆ. ಮುಂಜಾನೆ ಎದ್ದು ನೋಡಿದಾಗ ಪತಿ ಹಾಗೂ ಮಗ ಸಾವನ್ನಪ್ಪಿರುವುದು ಗೊತ್ತಾಗಿದೆ ಎಂದು ಹರಿಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹಗಳ ಮೇಲೆ ಗಾಯದ ಗುರುತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಶಂಕೆಯ ದೃಷ್ಟಿಯಿಂದ ತನಿಖೆ ಆರಂಭಿಸಿದ್ದಾರೆ. ಘಟನೆಗೆ ನಿಖರ ಕಾರಣವೇನು ಹಾಗೂ ತಂದೆ-ಮಗನ ಸಾವಿನ ಹಿಂದೆ ಯಾರಾದರೂ ಕೈವಾಡವಿದೆಯೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂಬಂಧ ಅಭಿನವ್ ಅವರ ಪತ್ನಿ ಹರಿಣಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಕುರಿತು ಚಿಕ್ಕಬಾಣವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬಿಹಾರದ ಅಶೋಕ ಧಾಮ ದೇವಾಲಯದಲ್ಲಿ ಕಾಲ್ತುಳಿತ : 7 ಭಕ್ತರ ದುರ್ಮರಣ, ಹಲವರಿಗೆ ಗಂಭೀರ ಗಾಯ


















