ಮನಿಲಾ : ದಕ್ಷಿಣ ಫಿಲಿಪೈನ್ಸ್‌ನಲ್ಲಿ ಇಂದು (ಜೂ.8) ಮುಂಜಾನೆ ಪ್ರಬಲ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಕಟ್ಟಡಗಳು ನೆಲಕ್ಕುರುಳಿದ್ದು, ಭಾರೀ ಭೂಕಂಪದ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.
ಇಂದು ಬೆಳಿಗ್ಗೆ 7:37ಕ್ಕೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ದಕ್ಷಿಣ ಫಿಲಿಪೈನ್ಸ್ ಮಿಂಡನಾವೋ ದ್ವೀಪದ ಜನರಲ್ ಸ್ಯಾಂಟೋಸ್ ನಗರದ (ಸಮೀಪದಲ್ಲಿ ಕೇಂದ್ರ ಬಿಂದುವಿದೆ ಎಂದು ರಿಕ್ಟರ್ ಮಾಪಕದಲ್ಲಿ ತೋರಿಸಿದೆ.
ಭೂಕಂಪದಿಂದಾಗಿ ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಜನರಲ್ ಸ್ಯಾಂಟೋಸ್ ನಗರದಲ್ಲಿ ಸಂಪೂರ್ಣ ಕತ್ತಲಲ್ಲಿ ಆವರಿಸಿದೆ. ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜೊತೆಗೆ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವೊಂದು ಭಾಗಶಃ ಕುಸಿದಿದೆ.
ಕಚೇರಿ ಸಮಯ ಆರಂಭಕ್ಕೂ ಮುನ್ನವೇ ಭೂಕಂಪ ಸಂಭವಿಸಿದ್ದರಿಂದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈವರೆಗೂ ಯಾವುದೇ ರೀತಿ ಸಾವು-ನೋವು ವರದಿಯಾಗಿಲ್ಲ.
ಇನ್ನೂ ಕರಾವಳಿ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಅಲ್ಲಿನ ಜನರು ತಕ್ಷಣವೇ ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ವಲಸೆ ಹೋಗುವಂತೆ ಸೂಚನೆ ನೀಡಲಾಗಿದೆ. ಫಿಲಿಪೈನ್ಸ್ ಭೂಕಂಪದ ಪರಿಣಾಮ ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದ್ದು, ಈಗಾಗಲೇ ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಈಗಾಗಲೇ 18 ಸೆ.ಮೀ ಎತ್ತರದ ಅಲೆಗಳು ಕಾಣಿಸಿಕೊಂಡಿವೆ.
ಇದನ್ನೂ ಓದಿ : ಜಮೀರ್ ಬಗ್ಗೆ ಕೋಡಿಮಠ ಶ್ರೀಗಳಿಂದ ಸ್ಫೋಟಕ ಭವಿಷ್ಯ – ಸಚಿವ ಸ್ಥಾನ ಸಿಗುತ್ತಾ? ಇಲ್ವಾ?



















