ಹಾಸನ : ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮೇಲೆ ಬಂದ ಒಂದೇ ಒಂದು ಪಕ್ಷ ವಿರೋಧಿ ಚಟುವಟಿಕೆ ಆರೋಪ, ಅವರ ರಾಜಕೀಯಕ್ಕೇ ಕಗ್ಗಂಟಾಗಿ ಕಾಡುತ್ತಿದೆ. ಸಚಿವ ಸಂಪುಟದ ಮೊದಲ ಪಟ್ಟಿಯಲ್ಲೇ ಇರಬೇಕಿದ್ದ ನಾಯಕನಿಗೆ, ಇದೀಗ ಸಚಿವ ಸ್ಥಾನ ಸಿಗುತ್ತೋ ಇಲ್ವೋ ಅನ್ನೋದೇ ಡೌಟ್ ಆಗಿದೆ. ಈ ಬೆನ್ನಲ್ಲೇ ಜಮೀರ್ ಬಗ್ಗೆ ಕೋಡಿಮಠ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಹತ್ವದ ಹೇಳಿಕೆ ನೀಡಿದ್ದು, ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಜಮೀರ್ ಅವರ ವಿರುದ್ಧ ನಡೆಯುತ್ತಿರುವುದು ಕೇವಲ ಪ್ರಚಾರವಲ್ಲ, ಅಪಪ್ರಚಾರ ಎಂದು ಹೇಳಿದ ಶ್ರೀಗಳು, ಸತ್ಯಾಂಶಗಳನ್ನು ಮರೆಮಾಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಮೀರ್ ಅವರಿಗೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದ್ದು, ಅವರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.
ಇದೇ ವೇಳೆ ಜಮೀರ್ ಅಹ್ಮದ್ ಖಾನ್ ಅವರು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಅವರೊಂದಿಗೆ ಕೆ. ಎಂ. ಶಿವಲಿಂಗೇಗೌಡ ಅವರೂ ಸಚಿವರಾಗಲಿದ್ದಾರೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ. “ಜಮೀರ್ ಇಲ್ಲದ ಸರ್ಕಾರ ಸರ್ಕಾರವೇ ಅಲ್ಲ, ಜಮೀರ್ ಇದ್ದರೆ ಸರ್ಕಾರ” ಎಂಬ ಮಾತಿನ ಮೂಲಕ ಅವರು ಜಮೀರ್ ಅವರ ರಾಜಕೀಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.
ಜಮೀರ್ ಅಹ್ಮದ್ ಖಾನ್ ಜಾತ್ಯಾತೀತವಾಗಿ ಜನಸೇವೆ ಮಾಡಿಕೊಂಡು ಬಂದಿದ್ದು, ಅವರಿಗೆ ಭಗವಂತನ ಕೃಪೆ ಇದೆ. ಅವರು ಮತ್ತೆ ಸಚಿವರಾಗುವುದನ್ನು ನಾವು ನೋಡುತ್ತೇವೆ. ಬೆಂಬಲಿಗರು ಯಾವುದೇ ರೀತಿಯ ಆಕ್ರೋಶಕ್ಕೆ ಒಳಗಾಗದೆ ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದ ಕೋಡಿ ಶ್ರೀ , ಜಮೀರ್ ಹಾಗೂ ಕೆ.ಎಂ. ಶಿವಲಿಂಗೇಗೌಡ ಸಚಿವರಾದ ಬಳಿಕ ಇಬ್ಬರನ್ನೂ ಮಠಕ್ಕೆ ಆಹ್ವಾನಿಸಿ ಸನ್ಮಾನ ಮಾಡುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ : ಗ್ರಾಹಕರಿಗೆ ಶಾಕ್.. ಗಗನಕ್ಕೇರಿದ ತರಕಾರಿ ದರ!


















