ಬಳ್ಳಾರಿ : ಬಳ್ಳಾರಿಯಲ್ಲಿ ಲಾರಿ ಮಾಲೀಕರ ಹಿತ ಕಾಪಾಡುವ ಉದ್ದೇಶದಿಂದ ಆರಂಭವಾಗಿದ್ದ ಲಾರಿ ಮಾಲೀಕರ ಸಂಘದಲ್ಲೇ ಇದೀಗ ಬಣ ರಾಜಕೀಯ ತಾರಕಕ್ಕೇರಿದ್ದು, ಲಾರಿ ಟರ್ಮಿನಲ್ ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಗುಂಪುಗಳ ನಡುವೆ ಭಾರೀ ಘರ್ಷಣೆ ನಡೆದಿದೆ. ನಗರದ ಬೆಂಗಳೂರು ರಸ್ತೆಯಲ್ಲಿರುವ ಲಾರಿ ಟರ್ಮಿನಸ್ ಬಳಿ ನಡೆದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಂಘದ ಒಳಜಗಳ ಮತ್ತೊಮ್ಮೆ ಬಹಿರಂಗವಾಗಿದೆ.
ಈ ಹಿಂದೆ ಲಾರಿ ಟರ್ಮಿನಲ್ ಅಧ್ಯಕ್ಷರಾಗಿದ್ದ ಮಹಾನಗರ ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ತಮ್ಮ ಬೆಂಬಲಿಗ ಮಹೇಶ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಆದರೆ ಈ ಆಯ್ಕೆಯನ್ನು ವಿರೋಧಿಸಿದ ಮತ್ತೊಂದು ಬಣ, ಕಾರ್ಯದರ್ಶಿ ಮಹೆಬೂಬ್ ಪಾಷಾ ನೇತೃತ್ವದಲ್ಲಿ ಬೇರೆ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಲು ಪ್ರಯತ್ನ ನಡೆಸುತ್ತಿತ್ತು. ಈ ವಿಚಾರವಾಗಿ ಹಲವು ದಿನಗಳಿಂದ ಎರಡೂ ಗುಂಪುಗಳ ನಡುವೆ ತಿಕ್ಕಾಟ ಮುಂದುವರಿದಿತ್ತು.
ಜೂನ್ 6ರಂದು ಲಾರಿ ಟರ್ಮಿನಲ್‌ಗೆ ಆಗಮಿಸಿದ್ದ ಮತ್ತೊಂದು ತಂಡದ ಸದಸ್ಯರೊಂದಿಗೆ ಮಾತಿನ ಚಕಮಕಿ ಆರಂಭವಾಗಿ, ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಬಳಿಕ ಎರಡೂ ಗುಂಪಿನ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಎರಡೂ ಕಡೆಯ ಐದಾರು ಮಂದಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕೆಲ ಪ್ರಭಾವಿಗಳ ಕುಮ್ಮಕ್ಕಿನಿಂದಲೇ ಈ ಘರ್ಷಣೆ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಘಟನೆ ಕುರಿತು ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಸಿಸಿ ಕ್ಯಾಮೆರಾ ದೃಶ್ಯಗಳು ಇದೀಗ ವೈರಲ್ ಆಗಿದ್ದು, ಲಾರಿ ಟರ್ಮಿನಲ್‌ನಲ್ಲಿನ ಅಧಿಕಾರದ ಕದನ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಹಾಸನದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ – ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಪರಾರಿ!


















