ಬೆಂಗಳೂರು : ಕರ್ನಾಟಕ ಕಾಂಗ್ರೆಸ್‌ನಲ್ಲಿ ಕೊನೆಗೂ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆಬಿದ್ದಿದ್ದು, ರಾಜ್ಯ ರಾಜಕೀಯ ಚಟುವಟಿಕೆಗಳು ಈಗ ದೆಹಲಿಗೆ ಶಿಫ್ಟ್ ಆಗಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅಧಿಕೃತವಾಗಿ ರಾಜೀನಾಮೆ ನೀಡುತ್ತಿದ್ದಂತೆಯೇ, ನೂತನ ಮುಖ್ಯಮಂತ್ರಿಯಾಗಿ ಉಪಮುಖ್ಯಮಂತ್ರಿ, ಕನಕಪುರ ಬಂಡೆ ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ನಿನ್ನೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ದೆಹಲಿಗೆ ಪ್ರಯಾಣಿಸಿದ್ದಾರೆ. ನೂತನ ಸರ್ಕಾರ, ಸಂಪುಟ ರಚನೆ ಸಂಬಂಧ ಉಭಯ ನಾಯಕರು ಇಂದು ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಹೈಕಮಾಂಡ್ ಜೊತೆ ಸಂಪುಟ ರಚನೆ ವೇಳೆ ತಮ್ಮ ಆಪ್ತರನ್ನು ಪರಿಗಣಿಸುವಂತೆ ಸಿದ್ದರಾಮಯ್ಯ ಮನವಿ ಮಾಡಲಿದ್ದಾರೆ. ಪುತ್ರನಿಗೆ ಮಂತ್ರಿ ಸ್ಥಾನ ಸೇರಿದಂತೆ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಹೊಸ ಸರ್ಕಾರದಲ್ಲಿ ಯಾವುದೇ ಗೊಂದಲ, ಬಿಕ್ಕಟ್ಟು ತಲೆದೋರದಂತೆ ಸಿದ್ದರಾಮಯ್ಯ ಮಾರ್ಗದರ್ಶನ ನೀಡುವ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಲಿದೆ. ಯಾವುದೇ ಅವಿಶ್ವಾಸ ಮೂಡದೇ ವಿಪಕ್ಷಗಳಿಗೆ ಆಹಾರವಾಗದಂತೆ ಸರ್ಕಾರ ನಡೆಸುವ ಬಗ್ಗೆ ಒಗ್ಗಟ್ಟು ಪ್ರದರ್ಶಿಸಿ ಮುಂದಿನ ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಗೆಲುವಿನ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ನೂತನ ಸಂಪುಟದ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚಿತ ಆಪ್ತ ಸಚಿವರು, ಶಾಸಕರನ್ನು ನೂತನ ಸಂಪುಟದಲ್ಲಿ ಮುಂದುವರೆಸಲು, ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಡಿಸಿಎಂ ಡಿಕೆಶಿ ತಮ್ಮ ಆಪ್ತರ ಪಟ್ಟಿಯನ್ನೂ ಕೊಂಡೊಯ್ದಿದ್ದು, ಈ ಬಗ್ಗೆಯೂ ಚರ್ಚಿಸಲಿದ್ದಾರೆ.
ಜೊತೆಗೆ ಹೊಸ ಡಿಸಿಎಂಗಳ ಬಗ್ಗೆ ಮಾತುಕತೆ ನಡೆಯಲಿದ್ದು, ಸಂಪುಟದಲ್ಲಿ ಎಷ್ಟು ಡಿಸಿಎಂಗಳು, ಯಾವ ಸಮುದಾಯಕ್ಕೆ ಡಿಸಿಎಂಗಳು ಕೊಡಬೇಕು ಎಂಬ ಬಗ್ಗೆ ಹೈಕಮಾಂಡ್ ಬಳಿ ಚರ್ಚೆ ನಡೆಯುವ ಸಾಧ್ಯತೆ ಇದೆ. ನೂತನ ಸಂಪುಟದಲ್ಲಿ ಸಮುದಾಯವಾರು, ಪ್ರಾದೇಶಿಕವಾರು ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿದೆ. ಜೊತೆಗೆ ನೂತನ ಸಿಎಂ ಪ್ರಮಾಣವಚನ ದಿನಾಂಕವೂ ಚರ್ಚೆಗೆ ಬರಲಿದೆ.
ಸದ್ಯದ ಮಾಹಿತಿ ಪ್ರಕಾರ, 13-15 ಹಾಲಿ ಸಚಿವರನ್ನು ಮುಂದುವರೆಸುವ ಮಾತುಗಳು ಕೇಳಿ ಬರುತ್ತಿದ್ದರೆ, ಉಳಿದಂತೆ 17 ಹೊಸ ಮುಖಗಳಿಗೆ ಸಂಪುಟದಲ್ಲಿ ಮಣೆ ಹಾಕುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎರಡು ಡಿಸಿಎಂ ಹುದ್ದೆಗಳು ಇರಲಿದ್ದು, ಒಂದು ಒಬಿಸಿ ಸಮುದಾಯ ಮತ್ತೊಂದು ಎಸ್ಸಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಹೈಕಮಾಂಡ್ ಬಳಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : 15 ವರ್ಷದ ಯುವ ಆಟಗಾರನ ಬೆನ್ನು ತಟ್ಟಿದ SRH ಒಡತಿ ಕಾವ್ಯಾ ಮಾರನ್!



















