ಶಿವಮೊಗ್ಗ/ ಬೆಳಗಾವಿ/ ಮೈಸೂರು: ಇಂದು ರಾಜ್ಯದ ಹಲವೆಡೆ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದಾರೆ. ಹಾಗೆಯೇ ಶಿವಮೊಗ್ಗ ವಿವಿಧೆಡೆ ಇಂದು ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ.ಆರ್. ಅವರಿಗೆ ಸೇರಿದ ಐದು ಪ್ರತ್ಯೇಕ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಲೋಕಾಯುಕ್ತ ಅಧಿಕಾರಿಗಳ ತಂಡವು ಶಿವಮೊಗ್ಗ, ಶಿಕಾರಿಪುರ ಹಾಗೂ ಸಾಗರ ತಾಲೂಕುಗಳಲ್ಲಿ ಈ ಕಾರ್ಯಾಚರಣೆ ಕೈಗೊಂಡಿದ್ದು, ಮುಖ್ಯವಾಗಿ ಶಿಕಾರಿಪುರ ಪಟ್ಟಣದ ಚೆನ್ನಕೇಶವ ನಗರದಲ್ಲಿರುವ ಶೋಭಾ ಅವರ ಸ್ವಂತ ನಿವಾಸ, ಸಾಗರ ತಾಲೂಕಿನ ಆನಂದಪುರದ ಅಚಾಪುರ ಬಳಿ ಇರುವ ಅವರ ಒಡೆತನದ ‘ಕ್ರಿಯೇಟಿವ್ ಶಾಲೆ’, ಶೋಭಾ ಅವರ ಆಪ್ತ ಸಹಾಯಕನ ಮನೆ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ತಪಾಸಣೆ ನಡೆಸಲಾಯಿತು.
ದಾವಣಗೆರೆ ಲೋಕಾಯುಕ್ತ ಎಸ್ಪಿಯವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಈ ಬೃಹತ್ ಕಾರ್ಯಾಚರಣೆಯಲ್ಲಿ ಶಿವಮೊಗ್ಗ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳನ್ನೊಳಗೊಂಡ ಐದು ಪ್ರತ್ಯೇಕ ತಂಡಗಳು ಪಾಲ್ಗೊಂಡಿವೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾ ದಾಳಿ
ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಬೆಳಗಾವಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಎಇಇ ಅಜಯ್ ಸಿಂಗ್ ರಜಪೂತ ಅವರ ಬೆಳಗಾವಿ ಆಂಜನೇಯ ನಗರದ ಮನೆ, ಅಥಣಿ ಹಾಗೂ ಹುಕ್ಕೇರಿ ಮನೆ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ.. ಬೆಳಗಾವಿ ನಗರದಲ್ಲೇ ಅಕ್ಕಪಕ್ಕದಲ್ಲಿ ಮೂರು ಮನೆ ಹೊಂದಿರುವ ಅಧಿಕಾರಿ. ಅಕ್ರಮ ಆಸ್ತಿ ಹೊಂದಿರೋ ಆರೋಪದಡಿ ವೈಎಸ್ಪಿ ಬಿಎಸ್ ಪಾಟೀಲ್, ಭರತ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ನಡೆಸಲಾಗಿದೆ. ಈ ವೇಳೆ ಒಂದು ಕೆಜಿಗೂ ಅಧಿಕ ಚಿನ್ನಾಭರಣ, ಎರಡು ಕೋಟಿ ರೂಪಾಯಿ ಬ್ಯಾಂಕ್ ನಲ್ಲಿ ಡೆಪಾಸಿಟ್ ಪತ್ತೆಯಾಗಿದೆ.

ಮೈಸೂನಲ್ಲಿಯೂ ಲೋಕಾಯುಕ್ತರ ಕಾರ್ಯಾಚರಣೆ
ಮೈಸೂನಲ್ಲಿಯೂ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಆದಯ ಗಳಿಕೆ ಆರೋಪದ ಹಿನ್ನೆಲೆ ಲೋಕೋಪಯೋಗಿ ಇಲಾಖೆ ಎ ಇ ಇ ರೇವಣ್ಣ ಅವರ ಎರಡು ಮನೆ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಯುಕ್ತ ಎಸ್.ಪಿ ಟಿ ಜೆ ಉದೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಡಿ ಎಸ್ ಪಿ ಶೈಲೇಂದ್ರ ಹಾಗೂ ವೆಂಕಟೇಶ್ ನೇತೃತ್ವದಲ್ಲಿ
ಇನ್ಸಪೆಕ್ಟರ್ ಶಶಿಕುಮಾರ್ ಸೇರಿ ಸಿಬ್ಬಂದಿ ಭಾಗಿಯಾಗಿದ್ದರು.

ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್ ಭಟ್ಗೆ ಪೋಕ್ಸೋ ಸಂಕಷ್ಟ – 2 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್!



















