ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದೆ. ಪಕ್ಷದ ನಾಯಕರ ನಡುವಿನ ಆಂತರಿಕ ಅಸಮಾಧಾನ ಹಾಗೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನ ಪ್ರದರ್ಶನಕ್ಕೆ ನಾಯಕರು ಮುಂದಾಗಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಮೂಲಕ 2028ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಇದರ ಭಾಗವಾಗಿಯೇ ಇದೀಗ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ನಾಗೇಂದ್ರ ರಾಜೀನಾಮೆ ಆಗ್ರಹದ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ವೇಗ ನೀಡುವುದರ ಜೊತೆಗೆ ಪಕ್ಷ ಸಂಘಟನೆಗೂ ಒತ್ತು ನೀಡುವುದು ಬಿಜೆಪಿಯ ತಂತ್ರವಾಗಿದೆ.
ರಾಯಚೂರಿನಿಂದ ಬಳ್ಳಾರಿವರೆಗೆ ಸುಮಾರು 170 ಕಿಲೋಮೀಟರ್ ದೂರವನ್ನು 10 ದಿನಗಳ ಕಾಲ ಪಾದಯಾತ್ರೆ ನಡೆಸಲು ಬಿಜೆಪಿ ಮುಂದಾಗಿದೆ. ವಾಲ್ಮೀಕಿ ಹಗರಣದ ಆರೋಪಗಳ ನಡುವೆಯೂ ನಾಗೇಂದ್ರ ಅವರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ನೀಡಿರುವುದನ್ನು ಪ್ರಶ್ನಿಸಿ ವಿಪಕ್ಷಗಳು ಈಗಾಗಲೇ ವಿರೋಧ ವ್ಯಕ್ತಪಡಿಸುತ್ತಿದ್ದು, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ರಾಜಕೀಯ ಸಮರಕ್ಕೆ ಸಜ್ಜಾಗಿದೆ.
ಈ ಪಾದಯಾತ್ರೆಯ ಮೂಲಕ ಕೇವಲ ನಾಗೇಂದ್ರ ರಾಜೀನಾಮೆ ವಿಚಾರವನ್ನಷ್ಟೇ ಮುಂದಿಟ್ಟುಕೊಳ್ಳದೆ, ಕಾಂಗ್ರೆಸ್ ಸರ್ಕಾರದ ವಿವಿಧ ವೈಫಲ್ಯಗಳನ್ನೂ ಜನರ ಮುಂದೆ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ವಿಶೇಷವಾಗಿ 11 ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಹೋರಾಟ ನಡೆಸುವ ಮೂಲಕ ಆ ಭಾಗದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಲೆಕ್ಕಾಚಾರವೂ ಬಿಜೆಪಿಯಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಂದೆಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಹೋರಾಟ, ಮತ್ತೊಂದೆಡೆ ಪಕ್ಷದೊಳಗಿನ ಅಸಮಾಧಾನಗಳನ್ನು ಬದಿಗಿಟ್ಟು ನಾಯಕರನ್ನು ಒಗ್ಗೂಡಿಸುವ ಪ್ರಯತ್ನ. ಇದರ ಜೊತೆಗೆ 2028ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶವೂ ಈ ಪಾದಯಾತ್ರೆಯ ಹಿಂದೆ ಇದೆ. ಹೀಗಾಗಿ ಒಂದೇ ಪಾದಯಾತ್ರೆ ಬಿಜೆಪಿಗೆ ಹಲವು ರಾಜಕೀಯ ಲೆಕ್ಕಾಚಾರಗಳನ್ನು ಹೊಂದಿದ್ದು, ಮುಂದಿನ ಚುನಾವಣೆಗೆ ಪಕ್ಷದ ಸಿದ್ಧತೆಯ ಮೊದಲ ಹಂತವಾಗಲಿದೆ ಎನ್ನಲಾಗಿದೆ.
ಬೆಂಗಳೂರು : ಟೀಕಾಕಾರರ ಬಾಯಿ ಮುಚ್ಚಿಸಿದ ಪ್ರಸಿದ್ಧ್ ಕೃಷ್ಣ : ಕೊಲಂಬೊ ಟೆಸ್ಟ್‌ನಲ್ಲಿ ಮಿಂಚಿದ ಕರ್ನಾಟಕದ ವೇಗಿ


















