ಜಬಲ್ಪುರ್ : ಮಧ್ಯಪ್ರದೇಶದ ಬರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಭೀಕರ ಕ್ರೂಸ್ ಬೋಟ್ ದುರಂತಕ್ಕೆ ಸಂಬಂಧಿಸಿದ ಹೊಸ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಸಿಗರ ಅಂತಿಮ ಕ್ಷಣಗಳ ದಾರುಣ ದೃಶ್ಯಗಳು ಕಣ್ಣೀರು ತರಿಸುವಂತಿವೆ. 9 ಜೀವಗಳನ್ನು ಬಲಿಪಡೆದ ಈ ದುರಂತವು ಕೇವಲ ಆಕಸ್ಮಿಕವಲ್ಲ, ಬದಲಾಗಿ ಪ್ರವಾಸೋದ್ಯಮ ಇಲಾಖೆಯ ಬೇಜವಾಬ್ದಾರಿತನ ಮತ್ತು ಸುರಕ್ಷತಾ ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಇದೀಗ ಬಹಿರಂಗಗೊಂಡಿರುವ ವಿಡಿಯೋದಲ್ಲಿ, ಕ್ರೂಸ್ ಒಳಗೆ ಪ್ರವಾಸಿಗರು ಸಂಭ್ರಮದಿಂದ ಕುಳಿತಿರುವುದು ಕಂಡುಬರುತ್ತದೆ. ಆದರೆ ಹಠಾತ್ತನೆ ಬೋಟ್ ಒಳಗೆ ನೀರು ನುಗ್ಗಲು ಪ್ರಾರಂಭವಾಗುತ್ತಿದ್ದಂತೆ, ಅಲ್ಲಿಯವರೆಗಿದ್ದ ನಗು ಮಾಯವಾಗಿ ಕಿರುಚಾಟ ಶುರುವಾಗುತ್ತದೆ. ಭೀಕರ ಬಿರುಗಾಳಿಗೆ ಬೋಟ್ ಅತ್ತಿತ್ತ ತೂಗಾಡುತ್ತಿದ್ದರೆ, ಸಿಬ್ಬಂದಿಗಳು ಸೀಲ್ ಆಗಿದ್ದ ಲೈಫ್ ಜಾಕೆಟ್‌ಗಳನ್ನು ಬಿಚ್ಚಲು ಹರಸಾಹಸ ಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಲೈಫ್ ಜಾಕೆಟ್‌ಗಳು ಕೈಗೆ ಸಿಗದೆ ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವುದು ಮನಕಲಕುವಂತಿದೆ.
ನಿಯಮಗಳನ್ನು ಗಾಳಿಗೆ ತೂರಿದ ಕ್ರೂಸ್ ಆಪರೇಟರ್‌ಗಳು
2021ರ ಒಳನಾಡು ಹಡಗು ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ಪ್ರಯಾಣಿಕನಿಗೂ ಲೈಫ್ ಜಾಕೆಟ್ ನೀಡುವುದು ಕಡ್ಡಾಯ. ಆದರೆ ಈ ಕ್ರೂಸ್‌ನಲ್ಲಿ ಕೇವಲ 29 ಜನರಿಗೆ ಅವಕಾಶವಿದ್ದರೂ, 40ಕ್ಕೂ ಹೆಚ್ಚು ಪ್ರವಾಸಿಗರನ್ನು ತುಂಬಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಹವಾಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದ್ದರೂ, ಪ್ರವಾಸಿ ಬೋಟ್ ಅನ್ನು ನೀರಿನಲ್ಲಿ ಇಳಿಸಿರುವುದು ದೊಡ್ಡ ಮಟ್ಟದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ದುರಂತದಲ್ಲಿ ಈವರೆಗೆ 9 ಶವಗಳನ್ನು ಹೊರತೆಗೆಯಲಾಗಿದ್ದು, ಮೂವರು ಮಕ್ಕಳು ಸೇರಿದಂತೆ ನಾಲ್ವರು ಇನ್ನೂ ನಾಪತ್ತೆಯಾಗಿದ್ದಾರೆ.
ಕ್ಷಣ ಕ್ಷಣಕ್ಕೂ ಸಂಕಷ್ಟ ತಂದೊಡ್ಡಿದ ವಿಳಂಬ
ದುರಂತ ಸಂಭವಿಸಿದಾಗ ಸ್ಥಳೀಯ ಮೀನುಗಾರರು ಮತ್ತು ರೈತರು ಸುಮಾರು 15ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ಆದರೆ ಸರ್ಕಾರಿ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಲು ವಿಳಂಬವಾಗಿದ್ದು ಕೂಡ ಜೀವಹಾನಿಗೆ ಕಾರಣವಾಗಿದೆ. ಸಂಜೆ 6:15ಕ್ಕೆ ಕರೆ ಬಂದಿದ್ದರೂ, ರಕ್ಷಣಾ ವಾಹನಗಳು ಸರಿಯಾದ ಸಮಯಕ್ಕೆ ಸ್ಟಾರ್ಟ್ ಆಗದ ಕಾರಣ ತಂಡಗಳು ಬರುವುದು ತಡವಾಯಿತು ಎಂದು ವರದಿಯಾಗಿದೆ. ಈ ನಡುವೆ, ತಾಯಿ ಮರಿನಾ ಮತ್ತು 4 ವರ್ಷದ ಮಗ ತ್ರಿಶಾನ್ ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಪ್ರತಿಯೊಬ್ಬರ ಹೃದಯ ಮಿಡಿಯುವಂತೆ ಮಾಡಿದೆ.
ಸರ್ಕಾರದ ಕಠಿಣ ಕ್ರಮ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ರಾಜ್ಯಾದ್ಯಂತ ಎಲ್ಲಾ ಕ್ರೂಸ್ ಮತ್ತು ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ. ಕ್ರೂಸ್ ಪೈಲಟ್ ಮತ್ತು ಸಹಾಯಕ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಮಹಾದುರಂತದ ಹಿಂದಿನ ಪ್ರತಿಯೊಂದು ಲೋಪದೋಷಗಳನ್ನು ತನಿಖೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಸರ್ಕಾರ ಭರವಸೆ ನೀಡಿದೆ.
ಇದನ್ನೂ ಓದಿ : ಮಳೆಯ ಹಾವಳಿಗೆ ನಲುಗಿದ ಬ್ರ್ಯಾಂಡ್ ಬೆಂಗಳೂರು – ಜನಾಕ್ರೋಶ!



















