ಚೆನ್ನೈ: ಸೋಮವಾರದಿಂದ 4 ದಿನಗಳ ಕಾಲ ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ನೂತನ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ತಮಿಳುನಾಡಿನ ವಿಪಕ್ಷ ಡಿಎಂಕೆ ಬೆಂಬಲ ಘೋಷಿಸಿದೆ. ಕಳೆದ ಏಪ್ರಿಲ್‌ನಲ್ಲಿ ಈ ಮಸೂದೆಗೆ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ಕೇಂದ್ರ ಸರ್ಕಾರಕ್ಕೆ, ಲೋಕಸಭೆಯಲ್ಲಿ 22 ಸಂಸದರ ಬಲ ಹೊಂದಿರುವ ಡಿಎಂಕೆಯ ಈ ನಿರ್ಧಾರವು ದೊಡ್ಡ ಮಟ್ಟದ ಬಲ ತುಂಬಿದೆ. ಈ ಹಿಂದೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದ ಡಿಎಂಕೆ, ಇದೀಗ ತನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.
ಡಿಎಂಕೆ ನಿಲುವು ಬದಲಾಗಲು ಕಾರಣವೇನು?
ಇಂದು ಬೆಳಗ್ಗೆ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ನೂತನ ಮಸೂದೆಯನ್ನು ಬೆಂಬಲಿಸುವ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಬಳಿಕ ಮಾತನಾಡಿದ ಸಂಸದ ಎ. ರಾಜಾ, ಕೇಂದ್ರದ ನೂತನ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಪಕ್ಷದ ಬೆಂಬಲವಿರುವುದನ್ನು ಖಚಿತಪಡಿಸಿದರು. ಸಂಸದ ದಯಾನಿಧಿ ಮಾರನ್ ಕೂಡ ಸದನದಲ್ಲಿ ಮಸೂದೆಯ ಪರವಾಗಿ ಮತ ಚಲಾಯಿಸುವುದಾಗಿ ಪುನರುಚ್ಚರಿಸಿದ್ದಾರೆ. ಮಸೂದೆಯಲ್ಲಿ ದೇಶಾದ್ಯಂತ ಏಕರೂಪವಾಗಿ ಶೇ.50ರಷ್ಟು ಸ್ಥಾನಗಳನ್ನು ಹೆಚ್ಚಿಸುವ ಮತ್ತು ಮುಂದಿನ 25 ವರ್ಷಗಳ ಕಾಲ ಸ್ಥಾನಗಳ ಹೆಚ್ಚಳಕ್ಕೆ ತಡೆ (ಫ್ರೀಜ್) ನೀಡುವ ನಿಯಮಗಳನ್ನು ಕೇಂದ್ರ ಸರ್ಕಾರ ಸೇರ್ಪಡೆಗೊಳಿಸಿರುವುದೇ ಡಿಎಂಕೆಯ ಈ ಬೆಂಬಲಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.
ತಮಿಳುನಾಡಿನ ಪ್ರಾತಿನಿಧ್ಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ
ಪುನರ್ವಿಂಗಡಣೆಯ ನಂತರದ ಸಂಸತ್ತಿನಲ್ಲಿ ತಮಿಳುನಾಡಿನ ಪ್ರಸ್ತುತ ಶೇ.7.2ರಷ್ಟು ಪಾಲು ಹಾಗೆಯೇ ಉಳಿಯಲಿದ್ದು, ರಾಜ್ಯದ ಲೋಕಸಭಾ ಸ್ಥಾನಗಳ ಸಂಖ್ಯೆ 39ರಿಂದ 59ಕ್ಕೆ ಏರಿಕೆಯಾಗಲಿದೆ. ಇದಕ್ಕೆ ಡಿಎಂಕೆ ಸಮ್ಮತಿ ಸೂಚಿಸಿದೆ. ಶುಕ್ರವಾರವಷ್ಟೇ ಈ ಕುರಿತು ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಜನಸಂಖ್ಯೆ ಆಧಾರಿತ ಪುನರ್ವಿಂಗಡಣೆಯ ಅಪಾಯಗಳ ವಿರುದ್ಧ ತಾವು ಈ ಹಿಂದೆ ಚೆನ್ನೈನಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಧ್ವನಿ ಎತ್ತಿದ್ದನ್ನು ಸ್ಮರಿಸಿದ್ದರು. ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗಬಾರದು ಮತ್ತು 1971ರ ಜನಗಣತಿ ಆಧಾರಿತ ಅಂತಾರಾಜ್ಯ ಹಂಚಿಕೆಯನ್ನು ಮುಂದಿನ 25 ವರ್ಷಗಳವರೆಗೆ ಯಥಾಸ್ಥಿತಿಯಲ್ಲಿಡಬೇಕು ಎಂಬ ತಮ್ಮ ಬೇಡಿಕೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್ ಮೈತ್ರಿ ಕಡಿದುಕೊಂಡಿದ್ದಕ್ಕೂ ಇದಕ್ಕೂ ಸಂಬಂಧವಿಲ್ಲ
ಸಂಸತ್ತಿನ ಒಟ್ಟು ಸದಸ್ಯ ಬಲ ಹೆಚ್ಚಾಗುವುದಕ್ಕಿಂತ ಹೆಚ್ಚಾಗಿ, ಈ ಪ್ರಕ್ರಿಯೆಯಲ್ಲಿ ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯದ ಪ್ರಮಾಣ ಕಡಿಮೆಯಾಗಬಾರದು ಎಂಬುದು ನಮ್ಮ ಮುಖ್ಯ ಕಾಳಜಿಯಾಗಿತ್ತು ಎಂದು ಡಿಎಂಕೆ ಮೂಲಗಳು ತಿಳಿಸಿವೆ. ಇದೇ ವೇಳೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಕಡಿದುಕೊಂಡ ನಂತರ ಡಿಎಂಕೆ ತನ್ನ ನಿಲುವು ಬದಲಿಸಿದೆ ಎಂಬ ಆರೋಪಗಳನ್ನು ಪಕ್ಷವು ಸಾರಾಸಗಟಾಗಿ ತಳ್ಳಿಹಾಕಿದೆ. ನ್ಯಾಯಸಮ್ಮತವಾದ ಕ್ಷೇತ್ರ ಪುನರ್ವಿಂಗಡಣೆ ನಡೆಯಬೇಕು ಎಂಬುದು ಮೊದಲಿನಿಂದಲೂ ನಮ್ಮ ಪಕ್ಷದ ಸ್ಪಷ್ಟ ಬೇಡಿಕೆಯಾಗಿತ್ತು ಎಂದು ಡಿಎಂಕೆ ಸಮರ್ಥಿಸಿಕೊಂಡಿದೆ.



















