ಮುಂಬೈ: ಮುಂದಿನ ವಾರ ಮಂಡಿಸಲಾಗುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡಲು ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಲು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ), ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಅಧಿಕಾರ ಹಂಚಿಕೆಗಾಗಿ ಭಾರಿ ಬೇಡಿಕೆ ಮುಂದಿಟ್ಟಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ನವೆಂಬರ್ 30ರಂದು ಲೋಕಸಭೆ ಮತ್ತು ಡಿಸೆಂಬರ್ 2ರಂದು ರಾಜ್ಯಸಭೆಯ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಸದನದಲ್ಲಿ ಮತ ಚಲಾಯಿಸುವ ಮುನ್ನವೇ ಈ ಒಪ್ಪಂದವನ್ನು ಅಂತಿಮಗೊಳಿಸಲು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ.
ಕೇಂದ್ರದಲ್ಲಿ ಸುಳೆಗೆ ಸಚಿವ ಸ್ಥಾನ?
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಲೋಕಸಭಾ ಸಂಸದೆ ಹಾಗೂ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಎನ್‌ಸಿಪಿ (ಎಸ್‌ಪಿ) ನಾಯಕತ್ವ ಒತ್ತಾಯಿಸುತ್ತಿದೆ. ಇತ್ತೀಚಿನವರೆಗೂ ಇಂಡಿಯಾ ಒಕ್ಕೂಟದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಸುಳೆ, ಕಳೆದ ಕೆಲವು ದಿನಗಳಿಂದ ಕ್ಷೇತ್ರ ಪುನರ್ವಿಂಗಡಣೆಯ ಪರವಾಗಿ ಮಾತನಾಡುತ್ತಿದ್ದಾರೆ. ಇದೇ ವೇಳೆ, ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲೂ ಎರಡು ಸಂಪುಟ ಖಾತೆಗಳಿಗೆ ಪಕ್ಷ ಬೇಡಿಕೆ ಇಟ್ಟಿದೆ. ಜಯಂತ್ ಪಾಟೀಲ್ ಅವರಿಗೆ ಹಣಕಾಸು ಖಾತೆ ಮತ್ತು ಹಿರಿಯ ನಾಯಕ ಜಿತೇಂದ್ರ ಆವ್ಹಾಡ್ ಅವರಿಗೆ ಮತ್ತೊಂದು ಕ್ಯಾಬಿನೆಟ್ ಖಾತೆ ಸಿಗುವ ಸಾಧ್ಯತೆಯಿದೆ. ಅಲ್ಲದೆ, ಇತರ ಶಾಸಕರನ್ನು ಸಮಾಧಾನಪಡಿಸಲು ಎರಡು ರಾಜ್ಯ ಸಚಿವ ಸ್ಥಾನಗಳಿಗೂ ಪಟ್ಟು ಹಿಡಿಯಲಾಗಿದೆ. ಆದರೆ, ಸುಪ್ರಿಯಾ ಸುಳೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೇರಿಸುವಂತೆ ಪವಾರ್ ಒತ್ತಾಯಿಸುತ್ತಿದ್ದಾರೆ ಎಂಬ ವರದಿಗಳನ್ನು ಸ್ವತಃ ಸುಳೆ ಅವರೇ ತಳ್ಳಿಹಾಕಿದ್ದು, ವಿಧಾನಸಭೆಯಲ್ಲಿ ತಮ್ಮ ಪಕ್ಷಕ್ಕೆ ಇರುವುದು ಕೇವಲ 10 ಶಾಸಕರ ಬಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಒಡಕು ತಪ್ಪಿಸಲು ಈ ನಿರ್ಧಾರ ಎಂದ ಪವಾರ್
ಸಂಸತ್ತಿನಲ್ಲಿ ಮಸೂದೆಗೆ ಅಧಿಕೃತ ಬೆಂಬಲ ನೀಡುವ ಮೊದಲೇ ಅಧಿಕಾರ ಹಂಚಿಕೆಯ ಸೂತ್ರವನ್ನು ಅಂತಿಮಗೊಳಿಸಬೇಕು ಎಂಬುದು ಪಕ್ಷದ ಒಂದು ಬಣದ ಅಭಿಪ್ರಾಯವಾಗಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಶರದ್ ಪವಾರ್ ಅವರು ಈಗಾಗಲೇ ಕಾಂಗ್ರೆಸ್ ನಾಯಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಪಕ್ಷದ ‘ಅನಿವಾರ್ಯತೆ’ಯನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಎನ್‌ಸಿಪಿ (ಎಸ್‌ಪಿ) ಪಕ್ಷದಲ್ಲಿ ಮತ್ತೊಂದು ಒಡಕು ಉಂಟಾಗುವುದನ್ನು ತಪ್ಪಿಸಲು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುವುದು ಅತ್ಯಗತ್ಯವಾಗಿದೆ ಎಂದು ಪವಾರ್ ತಮ್ಮ ಮಿತ್ರಪಕ್ಷಗಳಿಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಪವಾರ್ ಅನಾರೋಗ್ಯದ ಕಾರಣ ನೀಡಿರುವ ಸುಪ್ರಿಯಾ ಸುಳೆ, ಶನಿವಾರ ನಡೆಯಲಿರುವ ಇಂಡಿಯಾ ಒಕ್ಕೂಟದ ಸಭೆಗೆ ಗೈರಾಗಲಿದ್ದು, ಸೋಮವಾರ ನೇರವಾಗಿ ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ತೀವ್ರ ಅಸಮಾಧಾನ
ಎನ್‌ಸಿಪಿ (ಎಸ್‌ಪಿ) ಪಕ್ಷದ ಈ ನಡೆಗೆ ಮಹಾರಾಷ್ಟ್ರ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, 2026ರ ಮಾರ್ಚ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ 85 ವರ್ಷದ ಶರದ್ ಪವಾರ್ ಅವರ ಗೆಲುವಿಗಾಗಿ ಪಕ್ಷವು ತನ್ನ ಸ್ಥಾನವನ್ನೇ ತ್ಯಾಗ ಮಾಡಿತ್ತು ಎಂದು ನೆನಪಿಸಿದೆ. ಕೇವಲ 10 ಶಾಸಕರನ್ನು ಹೊಂದಿದ್ದ ಪವಾರ್ ಅವರಿಗೆ ಗೆಲ್ಲಲು 36 ಮತಗಳ ಅಗತ್ಯವಿದ್ದಾಗ, ಸುಪ್ರಿಯಾ ಸುಳೆ ಅವರ ಮನವಿಯ ಮೇರೆಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಬೆಂಬಲ ನೀಡಿದ್ದರು. ಆದರೆ ಈಗ ಅದೇ ನಾಯಕರು ಬಿಜೆಪಿ ಸರ್ಕಾರದ ಮಸೂದೆಯನ್ನು ಬೆಂಬಲಿಸುತ್ತಿರುವುದು ಸರಿಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


















