ಮಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಕಾರ್ಯಾಚರಣೆ ನಡೆಸಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿ ಮೂಲದ ನೌಷದ್ (32) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದ ಅಬ್ದುಲ್ ನಾಸೀರ್ (41) ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯ ಎಸಗಿದ ಬಳಿಕ ಪ್ರಮುಖ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದರೆಂಬ ಆರೋಪದಡಿ NIA ಬಂಧಿಸಿದೆ.
2022ರ ಜುಲೈ 26ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಕೈವಾಡವಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆಯನ್ನು ಮುಂದುವರಿಸಿರುವ NIA, ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಹಾಗೂ ಕೊಚ್ಚಿಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಹಳೆ ಮನೆ ರಿಪೇರಿ ವೇಳೆ ದುರಂತ – ಇಬ್ಬರು ಕಾರ್ಮಿಕರು ದಾರುಣ ಸಾವು!



















