ಬೆಂಗಳೂರು: ರೈಲು ಪ್ರಯಾಣಕ್ಕಾಗಿ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ತುಂಬ ಸವಾಲಿನ ಕೆಲಸವಾಗಿದೆ. ರೈಲು ಹೊರಡುವ ಒಂದು ದಿನ ಮೊದಲು ಕ್ಷಿಪ್ರವಾಗಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸರ್ವರ್ ಸಮಸ್ಯೆ, ನಿಧಾನಗತಿಯ ವೆಬ್ ಸೈಟ್ ಅಥವಾ ಆ್ಯಪ್ ನಿಂದಾಗಿ ಟಿಕೆಟ್ ಬುಕ್ ಮಾಡಲು ಆಗುವುದಿಲ್ಲ. ಇದನ್ನು ಮನಗಂಡಿರುವ ಭಾರತೀಯ ರೈಲ್ವೆ ಇಲಾಖೆಯು ಆಗಸ್ಟ್ ನಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರಲು ಸಜ್ಜಾಗಿದೆ. ಸುಮಾರು 40 ವರ್ಷಗಳ ಹಳೆಯದಾದ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು (PRS) ಬದಲಾಯಿಸಿ, ಅತ್ಯಾಧುನಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಮತ್ತು ಕ್ಲೌಡ್ ತಂತ್ರಜ್ಞಾನದ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ಪ್ರಮುಖ ಬದಲಾವಣೆಗಳ ಮಾಹಿತಿ ಇಲ್ಲಿದೆ
- ಬುಕಿಂಗ್ 5 ಪಟ್ಟು ಹೆಚ್ಚು ವೇಗ
ಈಗ ಇರುವ ವ್ಯವಸ್ಥೆಯಲ್ಲಿ ಪ್ರತಿ ನಿಮಿಷಕ್ಕೆ 32,000 ಟಿಕೆಟ್ ಗಳನ್ನು ಬುಕ್ ಮಾಡಬಹುದು. ಆದರೆ ಹೊಸ ತಂತ್ರಜ್ಞಾನದ ಅಪ್ ಗ್ರೇಡ್ ನಂತರ, ಪ್ರತಿ ನಿಮಿಷಕ್ಕೆ ಬರೋಬ್ಬರಿ 1.5 ಲಕ್ಷ ಟಿಕೆಟ್ ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ತತ್ಕಾಲ್ ಬುಕಿಂಗ್ ಸಮಯದಲ್ಲಿ ಉಂಟಾಗುತ್ತಿದ್ದ ಸರ್ವರ್ ಕ್ರಾಶ್ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಲಿವೆ. - ವೇಟ್ ಲಿಸ್ಟ್: ನಿಖರ ಮಾಹಿತಿ ನೀಡಲಿರುವ AI
ಹೊಸ ವ್ಯವಸ್ಥೆಯಲ್ಲಿ AI ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಇದು ವೇಟ್ ಲಿಸ್ಟ್ನಲ್ಲಿರುವ ಟಿಕೆಟ್ ಗಳು ಕನ್ಫರ್ಮ್ ಆಗುವ ಸಾಧ್ಯತೆಯನ್ನು ನಿಖರವಾಗಿ ಲೆಕ್ಕಾಚಾರ ಮಾಡುತ್ತದೆ. ಈ ಮುನ್ಸೂಚನೆಯ ನಿಖರತೆ (Accuracy) ಈ ಹಿಂದೆ ಶೇ.53ರಷ್ಟಿತ್ತು, ಆದರೆ ಈಗ ಅದನ್ನು ಶೇ.94 ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಶೇ.100ರಷ್ಟು ನಿಖರಗೊಳಿಸುವ ಗುರಿ ಇದೆ. - ಆನ್ ಲೈನ್ ಬುಕಿಂಗ್ ಗೆ ಆದ್ಯತೆ
ರೈಲ್ವೆ ಇಲಾಖೆಯ ಮಾಹಿತಿಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಶೇ.88ರಷ್ಟು ಟಿಕೆಟ್ ಗಳನ್ನು ಕೌಂಟರ್ ಗಳಿಗೆ ಹೋಗದೆ ಆನ್ ಲೈನ್ ಮೂಲಕವೇ ಬುಕ್ ಮಾಡಲಾಗುತ್ತಿದೆ. ದಿನಕ್ಕೆ ಸರಾಸರಿ 9.29 ಲಕ್ಷ ಟಿಕೆಟ್ಗಳು ಆನ್ ಲೈನ್ ನಲ್ಲಿ ಬುಕ್ ಆಗುತ್ತಿವೆ. ಇದರಲ್ಲಿ 7.2 ಲಕ್ಷ ಕಾಯ್ದಿರಿಸದ (unreserved) ಮತ್ತು 2.09 ಲಕ್ಷ ಕಾಯ್ದಿರಿಸಿದ (reserved) ಟಿಕೆಟ್ಗಳು ಸೇರಿವೆ. ಆನ್ ಲೈನ್ ಬುಕಿಂಗ್ ಗೆ ಇನ್ನುಮುಂದೆ ಇನ್ನಷ್ಟು ಆದ್ಯತೆ ನೀಡಲಾಗುತ್ತದೆ. - ತತ್ಕಾಲ್ ನಲ್ಲಿ ವಂಚನೆ ತಡೆ ಮತ್ತು ಸುಲಭ ಪ್ರಕ್ರಿಯೆ
ಇತ್ತೀಚಿನ ಮಾಹಿತಿ ಪ್ರಕಾರ, ಅಕ್ರಮವಾಗಿ ಟಿಕೆಟ್ ಬುಕ್ ಮಾಡುವ ಆಟೋಮೇಟೆಡ್ ಬಾಟ್ ಗಳನ್ನು (Bots) ಪತ್ತೆಹಚ್ಚಲು ಮತ್ತು ತಡೆಯಲು AI ಫ್ರಾಡ್ ಡಿಟೆಕ್ಷನ್ ವ್ಯವಸ್ಥೆಯನ್ನು ತರಲಾಗಿದೆ. ಜತೆಗೆ ತೊಂದರೆ ನೀಡುತ್ತಿದ್ದ ಕ್ಯಾಪ್ಚಾ (CAPTCHA) ಪ್ರಕ್ರಿಯೆಯನ್ನು ಸುಲಭಗೊಳಿಸಲಾಗುತ್ತಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಡಿಜಿಟಲ್ ಆಧುನೀಕರಣದ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದು, ಹಳೆಯ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ಬದಲಾಗುವಾಗ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.



















