ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ವಿಶೇಷವಾಗಿ ಮಹಿಳಾ ಕೈದಿಗಳ ಸ್ಥಿತಿಗತಿ, ಸೌಲಭ್ಯಗಳು, ಕುಂದುಕೊರತೆಗಳು ಹಾಗೂ ಅಹವಾಲುಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ಮಹಿಳಾ ಕೈದಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ ಅವರು, ಕಾರಾಗೃಹದ ಅಧಿಕಾರಿಗಳೊಂದಿಗೆ ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಅಡುಗೆಮನೆ, ಆಹಾರದ ಗುಣಮಟ್ಟ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಹಾಗೂ ಮನೋವೈದ್ಯಕೀಯ ಸೇವೆಗಳು, ಮಕ್ಕಳ ಆರೈಕೆ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ.
ಕಾರಾಗೃಹದಲ್ಲಿರುವ ಶಾಲೆ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಗೆ ಕೂಡ ಡಾ. ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ್ದು, ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಬಂದಿರುವ ಮಹಿಳಾ ಕೈದಿಗಳ ಮಕ್ಕಳಿಗೂ ಶಿಕ್ಷಣ ಕಲಿಸಲಾಗುತ್ತಿರುವ ವ್ಯವಸ್ಥೆಯನ್ನು ಅವರು ಶ್ಲಾಘಿಸಿದ್ದಾರೆ. ಕೈದಿಗಳ ಪುನರ್ವಸತಿಗೆ ಪೂರಕವಾಗುವ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಕಾರಾಗೃಹದಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರಗಳ ಕುರಿತು ಬಂದಿರುವ ದೂರುಗಳನ್ನು ಖುದ್ದಾಗಿ ಪರಿಶೀಲಿಸಿ, ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಕ್ರಮಗಳ ಕುರಿತು ಚರ್ಚಿಸಿದ್ದಾರೆ.
ಇನ್ನು, ಜಾಮೀನು ಹಾಗೂ ವಿದೇಶಿ ಕೈದಿಗಳ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದಾರೆ. “ಜಾಮೀನು ಮಂಜೂರಾದರೂ ಅಥವಾ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ, ಜಾಮೀನುದಾರರ ಹಣವನ್ನು ಪಾವತಿಸಲು ಸಾಧ್ಯವಾಗದೆ ಹಲವು ಕೈದಿಗಳು ದೀರ್ಘಕಾಲದಿಂದ ಕಾರಾಗೃಹದಲ್ಲೇ ಉಳಿದಿರುವುದು ಗಮನಕ್ಕೆ ಬಂದಿದೆ. ವಿಶೇಷವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ ಕೆಲವು ಕೈದಿಗಳು ಈ ಕಾರಣದಿಂದ ಬಿಡುಗಡೆಯಾಗದೆ ಇರುವ ವಿಚಾರವೂ ಗಮನಕ್ಕೆ ಬಂದಿದೆ,” ಎಂದು ತಿಳಿಸಿದ್ದಾರೆ.
ಜಾಮೀನು ಮೊತ್ತಕ್ಕೆ ಕಾನೂನುಬದ್ಧವಾಗಿ ಸಾಧ್ಯವಿರುವ ಪರ್ಯಾಯ ವ್ಯವಸ್ಥೆಗಳನ್ನು ಪರಿಶೀಲಿಸಿ, ಅರ್ಹರಾಗಿರುವ ಕೈದಿಗಳಿಗೆ ಬಿಡುಗಡೆಗೆ ಅವಕಾಶ ಕಲ್ಪಿಸುವ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ವಿದೇಶಿ ಕೈದಿಗಳ ವಿಷಯದಲ್ಲಿ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಅರ್ಹರನ್ನು ಅವರವರ ದೇಶಗಳಿಗೆ ಮರಳಿಸುವ ಸಾಧ್ಯತೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಾರಾಗೃಹ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಕಾರಾಗೃಹದಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಗಮನಿಸಿದ್ದೇವೆ. ಆದಾಗ್ಯೂ, ಲಭ್ಯವಿರುವ ಸಿಬ್ಬಂದಿ ಅತ್ಯಂತ ಸಮರ್ಪಣೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಕಾರಾಗೃಹದ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಕೈದಿಗಳ ಕಲ್ಯಾಣಕ್ಕೆ ಅಗತ್ಯವಿರುವ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ,” ಎಂದು ಹೇಳಿದ್ದಾರೆ.
ಬಳಿಕ ಕಾರಾಗೃಹದ ಅಡುಗೆಮನೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮೀ ಚೌಧರಿ, ಕೈದಿಗಳಿಗೆ ನೀಡಲಾಗುವ ಮುದ್ದೆ, ಅನ್ನ ಹಾಗೂ ಸಾಂಬಾರ್‌ನ್ನು ಸ್ವತಃ ಸೇವಿಸಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
“ಕೈದಿಗಳು ಸಹ ಸಮಾಜದ ಒಂದು ಭಾಗವಾಗಿದ್ದು, ಅವರಿಗೆ ಮಾನವೀಯತೆಯಿಂದ ಹಾಗೂ ಗೌರವದಿಂದ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಅವರ ಮೂಲಭೂತ ಸೌಲಭ್ಯಗಳು, ಆರೋಗ್ಯ, ಮಾನಸಿಕ ಕ್ಷೇಮ, ಶಿಕ್ಷಣ ಮತ್ತು ಪುನರ್ವಸತಿಗೆ ಅಗತ್ಯವಾದ ವ್ಯವಸ್ಥೆಗಳು ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕು,” ಎಂದು ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ : ದಾಖಲೆ ಬರೆದ ಪಂತ್ : ಟೆಸ್ಟ್‌ನಲ್ಲಿ ಅತಿ ವೇಗದ 100 ಸಿಕ್ಸರ್ ಸಿಡಿಸಿ ಗಿಲ್‌ಕ್ರಿಸ್ಟ್ ಹಿಂದಿಕ್ಕಿದ ಭಾರತೀಯ ಬ್ಯಾಟರ್!



















