ಬೆಂಗಳೂರು : ಖಾತಾ ಬದಲಾವಣೆಗೆ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಮತ್ತು ಅವರಿಗೆ ಸಾಥ್ ನೀಡಿದ್ದ ಯುಟ್ಯೂಬರ್ ಈಗ ಲೋಕಾಯುಕ್ತ ಅಧಿಕಾರಿಗಳ ಅತಿಥಿಯಾಗಿದ್ದಾರೆ.
ಹೌದು.. ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ, ಹಾಗೂ ಸ್ಥಳೀಯ ಖಾಸಗಿ ಯುಟ್ಯೂಬ್ ವಾಹಿನಿ ಪ್ರತಿನಿಧಿ ಗಂಗಾಧರ್ ಒಂದು ಲಕ್ಷ ರೂ. ಲಂಚದ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸದ್ಯ ಗೀತಾಮಣಿ ಹಾಗೂ ಗಂಗಾಧರ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಹೆಗ್ಗೇನಹಳ್ಳಿಯ ನಿವಾಸಿ ಫೈಜುಲ್ಲಾಸಾಬ್ ಎಂಬುವವರು ತಮ್ಮ ಜಮೀನಿನ ಖಾತಾ ಬದಲಾವಣೆಗಾಗಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಪಿಡಿಒ ಗೀತಾಮಣಿ ಅವರು ಬರೋಬ್ಬರಿ 1.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚದ ಹಣವನ್ನು ನೇರವಾಗಿ ಪಡೆಯಲು ಹಿಂಜರಿದ ಪಿಡಿಒ ಗೀತಾಮಣಿ, ತನಗೆ ಬರಬೇಕಾದ ಹಣವನ್ನು ಸ್ಥಳೀಯವಾಗಿ ಯುಟ್ಯೂಬ್ ವಾಹಿನಿ ನಡೆಸುತ್ತಿದ್ದ ಗಂಗಾಧರ್ ಎಂಬುವವನಿಗೆ ನೀಡುವಂತೆ ಫೈಜುಲ್ಲಾಸಾಬ್‌ಗೆ ಸೂಚಿಸಿದ್ದರು. ಆದರೆ, ಭ್ರಷ್ಟ ಅಧಿಕಾರಿಗೆ ಪಾಠ ಕಲಿಸಲು ನಿರ್ಧರಿಸಿದ ಫೈಜುಲ್ಲಾಸಾಬ್ ಕೂಡಲೇ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದರು.
ಬಳಿಕ ನೆಲಮಂಗಲದ ಬಳಿ ಫೈಜುಲ್ಲಾಸಾಬ್‌ನಿಂದ ಗಂಗಾಧರ್ ಲಂಚದ ಹಣವನ್ನು ಕೈಗೆ ಪಡೆಯುತ್ತಿದ್ದಂತೆಯೇ ಹಠಾತ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆತನನ್ನು ವಶಕ್ಕೆ ಪಡೆದಿದ್ದಾರೆ. ಗಂಗಾಧರ್ ನೀಡಿದ ಮಾಹಿತಿಯ ಆಧಾರದ ಮೇಲೆ ಪಿಡಿಒ ಗೀತಾಮಣಿ ಅವರನ್ನೂ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಆಫ್ರಿಕಾ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಸೋಲು ; ವಿಶ್ವಕಪ್ ಸಿದ್ಧತೆಗೆ ಆರಂಭದಲ್ಲೇ ಹಿನ್ನಡೆ!



















