ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಎಂಎಲ್‌ಸಿ ಮಾಡಿಸುವುದಾಗಿ ನಂಬಿಸಿ ₹5 ಕೋಟಿ ಬೇಡಿಕೆ ಇಟ್ಟು, ಬಳಿಕ ₹1.50 ಕೋಟಿ ಪಡೆದು ವಂಚನೆ ಎಸಗಿರುವ ಆರೋಪದ ಮೇಲೆ ಮೂವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡಿದ್ದ ಯರ್ರಿಸ್ವಾಮಿ ಸೇರಿದಂತೆ ಬಸವರಾಜು ಮತ್ತು ಸಿದ್ದರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ಮಂಗಳೂರು ಮೂಲದ ಸಂತ್ರಸ್ತ ಮಹಿಳೆಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ.
ಮಂಗಳೂರು ಮೂಲದ ಮಹಿಳೆ ಖಾಸಗಿ ಟ್ರಸ್ಟ್ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನ ಸೇರಿದಂತೆ ವಿವಿಧ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಯರ್ರಿಸ್ವಾಮಿ ಪರಿಚಯವಾಗಿ, “ನೀವು ಇಷ್ಟೊಂದು ಸಮಾಜಸೇವೆ ಮಾಡುತ್ತಿದ್ದೀರಿ, ಯಾಕೆ ಎಂಎಲ್‌ಸಿ ಆಗಬಾರದು” ಎಂದು ಹೇಳಿ ತನ್ನನ್ನು ಪ್ರಮುಖ ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹಾಗೂ ರಾಜ್ಯದ ಪ್ರಮುಖ ರಾಜಕಾರಣಿಗಳೊಂದಿಗೆ ಇರುವ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದಿಂದ ಎಂಎಲ್‌ಸಿ ಮಾಡಿಸಲು ₹5 ಕೋಟಿ ಬೇಕು ಎಂದು ಮೊದಲಿಗೆ ಹೇಳಿದ್ದ ಆರೋಪಿಯು, ಮಹಿಳೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದ ಬಳಿಕ ₹1.50 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. 2024ರ ಆಗಸ್ಟ್‌ನಿಂದ 2025ರ ಜನವರಿವರೆಗೆ ಒಟ್ಟು ₹1.50 ಕೋಟಿ ಹಣವನ್ನು ವಿವಿಧ ಹಂತಗಳಲ್ಲಿ ಪಡೆದಿರುವ ಆರೋಪ ಕೇಳಿಬಂದಿದೆ.
ಆರೋಪಿಯ ಸೂಚನೆಯಂತೆ ಬಸವರಾಜು ಹಾಗೂ ಸಿದ್ದರಾಜು ಅವರಿಗೆ ಹಣ ನೀಡಲಾಗಿದ್ದು, ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಸಮೀಪ ಹಣ ಹಸ್ತಾಂತರಿಸಲಾಗಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಇದರ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಂದರ್ಶನಕ್ಕೆ ಕರೆದಿದ್ದಾರೆ ಎಂದು ಹೇಳಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದ ಆರೋಪಿಯು, ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದ. ಅಲ್ಲಿಯೇ ಮಹಿಳೆಯ ಕೊಠಡಿಯ ಬಾಗಿಲು ಬಡಿದು ಒಳನುಗ್ಗಲು ಯತ್ನಿಸಿ, ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಕೊಠಡಿಯನ್ನು ಲಾಕ್ ಮಾಡಿಕೊಂಡಿದ್ದು, ಬಳಿಕ ಹಣವನ್ನು ವಾಪಸ್ ಕೇಳಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಸದ್ಯ ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಹಲಸೂರು ಗೇಟ್ ಪೊಲೀಸರು ಯರ್ರಿಸ್ವಾಮಿ, ಬಸವರಾಜು ಹಾಗೂ ಸಿದ್ದರಾಜು ವಿರುದ್ಧ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಕುರಿತು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : CWRC ಆದೇಶದ ವಿರುದ್ಧ ಕಾವೇರಿದ ಆಕ್ರೋಶ : ಇಂದು ಮಲ್ಲೇಶ್ವರದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ



















