ಬೆಂಗಳೂರು : ಕರ್ನಾಟಕ ಸರ್ಕಾರವು ಭೂರಹಿತರು ಜಮೀನು ಖರೀದಿಸಲಿ ಎಂದು ಭೂ ಒಡೆತನ ಯೋಜನೆ (Land ownership scheme) ಜಾರಿಗೆ ತಂದಿದೆ. ಅದರಲ್ಲೂ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಕ್ಕೆ (ST) ಸೇರಿದ ಭೂರಹಿತ ಕೃಷಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಸ್ವಂತ ಕೃಷಿ ಭೂಮಿಯನ್ನು ಒದಗಿಸುವ ಮೂಲಕ ಅವರನ್ನು ಭೂಮಾಲೀಕರನ್ನಾಗಿ ಮಾಡುವ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯೊಂದಿಗೆ ಯೋಜನೆ ರೂಪಿಸಲಾಗಿದೆ.
ಯೋಜನೆ ಅನ್ವಯ ಮಹಿಳಾ ಕೃಷಿ ಕಾರ್ಮಿಕರು ಸ್ವಂತ ಜಮೀನು ಖರೀದಿಸಲು ಸರ್ಕಾರವು 25 ಲಕ್ಷ ರೂಪಾಯಿ ಧನಸಹಾಯ ಮಾಡುತ್ತದೆ. ಭೂಮಿ ಖರೀದಿಸಲು ಸರ್ಕಾರದಿಂದ ಸಹಾಯಧನ (Subsidy) ಹಾಗೂ ಸಾಲದ ಸೌಲಭ್ಯ ನೀಡಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಮಹಿಳೆಯರಿಗೆ 25 ಲಕ್ಷ ರೂ. ಹಾಗೂ ಉಳಿದ 27 ಜಿಲ್ಲೆಗಳ ಮಹಿಳೆಯರಿಗೆ 20 ಲಕ್ಷ ರೂ. ನೀಡಲಾಗುತ್ತದೆ.
20-25 ಲಕ್ಷ ರೂಪಾಯಿಯಲ್ಲಿ ಶೇ.50ರಷ್ಟು ಹಣವನ್ನು ಸಬ್ಸಿಡಿಯನ್ನಾಗಿ ಹಾಗೂ ಉಳಿದ ಶೇ.50ರಷ್ಟು ಹಣವನ್ನು ಸಾಲವನ್ನಾಗಿ ನೀಡಲಾಗುತ್ತದೆ. ಸಾಲಕ್ಕೆ ಶೇ.6ರಷ್ಟು ಬಡ್ಡಿ ವಿಧಿಸಲಾಗುತ್ತದೆ ಹಾಗೂ ಸಾಲ ತೀರಿಸಲು 10 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಕೃಷಿ ಮಹಿಳಾ ಕಾರ್ಮಿಕರಾಗಿರಬೇಕು. 18-50 ವರ್ಷದೊಳಗಿನವರಾಗಿರಬೇಕು ಎಂದು ತಿಳಿಸಲಾಗಿದೆ.
ಭೂರಹಿತ ಕೃಷಿ ಮಹಿಳಾ ಕಾರ್ಮಿಕರು ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಭೂರಹಿತ ಪ್ರಮಾಣಪತ್ರ, ರೇಷನ್ ಕಾರ್ಡ್, ಭೂಮಿ ಮಾರಾಟ ಮಾಡುವವರಿಂದ ಒಪ್ಪಿಗೆ ಪತ್ರ, ಇತ್ತೀಚಿನ ಭಾವಚಿತ್ರವನ್ನು ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಯಸುವವರು https://sevasindhu.karnataka.gov.in/Sevasindhu/English ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಇದನ್ನೂ ಓದಿ : ಇನ್ನು 3 ತಿಂಗಳು ಕರ್ನಾಟಕಕ್ಕೆ ಬರಲ್ಲ ತಮಿಳುನಾಡಿನ ನಿರ್ಮಾಣ ಸಾಮಗ್ರಿಗಳು!



















