ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇವಲ ಬೈಕ್ ಪಾರ್ಕಿಂಗ್ ವಿಚಾರಕ್ಕೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ನೈಋತ್ಯ ದೆಹಲಿಯ ಬಿಂದಾಪುರ ಪ್ರದೇಶದಲ್ಲಿ ಭಾನುವಾರ ಕ್ಷುಲ್ಲಕ ಕಾರಣಕ್ಕೆ ದಂಪತಿ ಮೇಲೆ ನೆರೆಹೊರೆಯವರು ಚಾಕುವಿನಿಂದ ಹಲ್ಲೆ ನಡೆಸಿದ್ದು, ಪರಿಣಾಮ 32 ವರ್ಷದ ಮಹಿಳೆ ಮೃತಪಟ್ಟರೆ, ಆಕೆಯ ಪತಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ರಸ್ತೆಯಲ್ಲಿ ಬೈಕ್ ನಿಲ್ಲಿಸುವ ವಿಚಾರವಾಗಿ ದಂಪತಿ ಹಾಗೂ ಅವರ ನೆರೆಹೊರೆಯವರ ನಡುವೆ ಮಾತಿನ ಚಕಮಕಿ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ನೆರೆಮನೆಯವರು ದಂಪತಿಯ ಹೊಟ್ಟೆಗೆ ಚಾಕುವಿನಿಂದ ಮನಸೋ ಇಚ್ಛೆ ಇರಿದಿದ್ದಾರೆ. ಮಧ್ಯಾಹ್ನ ಸುಮಾರು 2.50ರ ವೇಳೆಗೆ “ಇಬ್ಬರು-ಮೂವರು ಹುಡುಗರು ನನ್ನ ಮಗಳು ಮತ್ತು ಅಳಿಯನಿಗೆ ಚಾಕುವಿನಿಂದ ಇರಿದಿದ್ದಾರೆ” ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ತಲುಪುವಷ್ಟರಲ್ಲೇ ಕೊನೆಯುಸಿರು
ಮಾಹಿತಿ ತಿಳಿಯುತ್ತಿದ್ದಂತೆ ಬಿಂದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಸ್ಥಳೀಯರು ಗಾಯಾಳುಗಳನ್ನು ದೀನ್ ದಯಾಳ್ ಉಪಾಧ್ಯಾಯ (DDU) ಆಸ್ಪತ್ರೆಗೆ ಸಾಗಿಸಿದ್ದರು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಆರತಿ ಎಂಬ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿರುವ ಆಕೆಯ ಪತಿ ವಿಕ್ಕಿ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ಬಂಧನಕ್ಕೆ ಬಲೆ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಅದೇ ಪ್ರದೇಶದ ನಿವಾಸಿಗಳಾದ 40 ವರ್ಷದ ಪಪ್ಪು ಮತ್ತು ಅಪ್ರಾಪ್ತ ಬಾಲಕನೇ ದಾಳಿ ನಡೆಸಿದವರು ಎಂದು ಗುರುತಿಸಿದ್ದಾರೆ. ಸದ್ಯ ಪ್ರಮುಖ ಆರೋಪಿ ಪಪ್ಪುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಅಪ್ರಾಪ್ತ ಹುಡುಗನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಿಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅನಾರೋಗ್ಯದಿಂದ ಬೇಸತ್ತ ಯುವಕ ನೇಣಿಗೆ ಶರಣು



















