ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷಗಳು ನಡೆಸುತ್ತಿರುವ ಗದ್ದಲ ಮತ್ತು ಕಲಾಪಕ್ಕೆ ಅಡ್ಡಿಪಡಿಸುವ ತಂತ್ರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅಸಮಾಧಾನ ಹೊರಹಾಕಿದ್ದು, ಸ್ವಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಸಂಸತ್ತಿನಲ್ಲಿ ಜನರ ಧ್ವನಿಯಾಗಲು ಗದ್ದಲ ಎಬ್ಬಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಸಂಸತ್ತಿನಲ್ಲಿ ನಡೆಯುತ್ತಿರುವ ನಿರಂತರ ಗದ್ದಲದ ಕುರಿತು ಪ್ರತಿಕ್ರಿಯಿಸಿದ ತರೂರ್, “ನಾನು ಈ ಮಾತನ್ನು ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇನೆ. ಸೋನಿಯಾ ಗಾಂಧಿ ಸೇರಿದಂತೆ ನನ್ನ ಪಕ್ಷದ ನಾಯಕರಿಗೆ ಈ ವಿಷಯ ಚೆನ್ನಾಗಿಯೇ ತಿಳಿದಿದೆ. ಪಕ್ಷದಲ್ಲಿ ನಾನು ಏಕಾಂಗಿಯಾಗಿರಬಹುದು, ಆದರೆ ಜನರು ನನ್ನನ್ನು ಸಂಸತ್ತಿಗೆ ಕಳುಹಿಸಿರುವುದು ಅವರ ಪರವಾಗಿ ಮಾತನಾಡಲು ಮತ್ತು ದೇಶದ ಹಿತಾಸಕ್ತಿಗಾಗಿ ನನ್ನ ಬುದ್ಧಿವಂತಿಕೆಯನ್ನು ಬಳಸಲು ಹೊರತು, ಕೇವಲ ಕೂಗಾಡಲು ಅಥವಾ ಗದ್ದಲ ಸೃಷ್ಟಿಸಲು ಅಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಮತ್ತು ವಿಮಾನಯಾನ ಕ್ಷೇತ್ರದಲ್ಲಿನ ಅವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರತಿಪಕ್ಷಗಳು ಚರ್ಚೆಗೆ ಆಗ್ರಹಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿವೇಶನಕ್ಕೂ ಮುನ್ನ ಯಾವುದೇ ನಾಟಕೀಯ ವರ್ತನೆ ಬೇಡ ಎಂದು ಎಚ್ಚರಿಸಿದ್ದರೂ, ಗದ್ದಲ ಮುಂದುವರಿದಿದೆ. ಬಿಜೆಪಿ ನಾಯಕರು ಅಧಿವೇಶನದ ವ್ಯತ್ಯಯಕ್ಕೆ ಪ್ರತಿಪಕ್ಷಗಳೇ ಕಾರಣ ಎಂದು ದೂರಿದ್ದಾರೆ. ಈ ಸಂದರ್ಭದಲ್ಲಿ ತರೂರ್ ಅವರ ಹೇಳಿಕೆ ಆಡಳಿತ ಪಕ್ಷದ ನಿಲುವನ್ನು ಬೆಂಬಲಿಸುವಂತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದೊಡ್ಡುವ ಸಾಧ್ಯತೆಯಿದೆ.
ಇತ್ತೀಚೆಗೆ ನಡೆದ ರಾಮನಾಥ್ ಗೋಯೆಂಕಾ ಉಪನ್ಯಾಸದಲ್ಲಿ ಪ್ರಧಾನಿ ಮೋದಿ ಅವರ ಭಾಷಣವನ್ನು ಶ್ಲಾಘಿಸಿದ್ದ ತರೂರ್, ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಸತತವಾಗಿ ಪಕ್ಷದ ಪ್ರಮುಖ ಸಭೆಗಳಿಗೆ ಗೈರಾಗುವ ಮೂಲಕ ಹಿರಿಯ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಊಹಾಪೋಹಗಳೂ ಹಬ್ಬಿದ್ದವು. ಇದೀಗ ಸಂಸತ್ತಿನ ಕಾರ್ಯವೈಖರಿಯ ಬಗ್ಗೆಯೂ ಭಿನ್ನ ರಾಗ ಹಾಡಿರುವ ಅವರು, ಪ್ರಜಾಪ್ರಭುತ್ವದ ದೇಗುಲದಲ್ಲಿ ವಿಷಯಾಧಾರಿತ ಚರ್ಚೆ ಮುಖ್ಯವೇ ಹೊರತು ಗದ್ದಲವಲ್ಲ ಎಂಬುದನ್ನು ಪ್ರತಿಪಾದಿಸಿದ್ದಾರೆ. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ತರೂರ್ ಅವರ ಈ ನಡೆಗೆ ಕಾಂಗ್ರೆಸ್ ಪಕ್ಷ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಇಂಡಿಗೋ ವಿಮಾನಗಳ ರದ್ದು : ದೇಶಾದ್ಯಂತ ಪ್ರಯಾಣಿಕರ ಪರದಾಟ, ವಿಮಾನ ನಿಲ್ದಾಣಗಳಲ್ಲಿ ಲಗೇಜ್‌ಗಳ ರಾಶಿ



















