ನವದೆಹಲಿ : ಭಾರತೀಯ ನೌಕಾಪಡೆಯ ಆಳ ಸಮುದ್ರದ ಕಾರ್ಯಾಚರಣೆ ಹಾಗೂ ಜಲಾಂತರ್ಗಾಮಿ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಸಿಕ್ಕಿದ್ದು, ‘ನಿಸ್ಟಾರ್’ ಶ್ರೇಣಿಯ ಎರಡನೇ ಡೈವಿಂಗ್ ಸಪೋರ್ಟ್ ವೆಸೆಲ್ (DSV) ‘ಐಎನ್‌ಎಸ್ ನಿಪುಣ್’ ಇಂದು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಮುಂಬೈನ ನೌಕಾ ಹಡಗುಕಟ್ಟೆಯಲ್ಲಿ (Naval Dockyard) ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಈ ಅತ್ಯಾಧುನಿಕ ನೌಕೆಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಮೈಲಿಗಲ್ಲು
ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ‘ನಿಪುಣ್’ ನೌಕೆಯನ್ನು ವಿಶಾಖಪಟ್ಟಣಂನ ‘ಹಿಂದುಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್’ (HSL) ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಿ ನಿರ್ಮಿಸಿದೆ. ಯುದ್ಧನೌಕೆಗಳ ನಿರ್ಮಾಣದಲ್ಲಿ ಭಾರತವು ಸ್ವಾವಲಂಬನೆ ಸಾಧಿಸುತ್ತಿರುವುದಕ್ಕೆ ಈ ನೌಕೆ ಪ್ರತ್ಯಕ್ಷ ಸಾಕ್ಷಿ. ವ್ಯಾಪಕವಾದ ಪರೀಕ್ಷೆಗಳು ಮತ್ತು ಸಜ್ಜುಗೊಳಿಸುವಿಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಇದೇ ಜುಲೈ 30ರಂದು ಈ ನೌಕೆಯನ್ನು ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.
ಸಮುದ್ರದಾಳದ ಕ್ಲಿಷ್ಟಕರ ಕಾರ್ಯಾಚರಣೆಗೆ ನೆರವು
‘ನಿಪುಣ್’ ಮುಖ್ಯವಾಗಿ ಸಮುದ್ರದಾಳದಲ್ಲಿ ನಡೆಯುವ ವಿವಿಧ ರೀತಿಯ ಡೈವಿಂಗ್ ಕಾರ್ಯಾಚರಣೆಗಳು ಹಾಗೂ ಜಲಾಂತರ್ಗಾಮಿ (ಸಬ್‌ಮರೀನ್) ರಕ್ಷಣಾ ಕಾರ್ಯಾಚರಣೆಗಳಿಗೆ ನೆರವು ನೀಡಲು ನಿರ್ಮಿಸಲಾದ ವಿಶೇಷ ವೇದಿಕೆಯಾಗಿದೆ. ಪ್ರತಿಕೂಲ ಕಡಲ ವಾತಾವರಣದಲ್ಲಿಯೂ ನೀರೊಳಗೆ ಇಳಿಯುವ ಡೈವರ್‌ಗಳಿಗೆ ದೀರ್ಘಕಾಲೀನ ಬೆಂಬಲ ನೀಡಬಲ್ಲ ಅತ್ಯಾಧುನಿಕ ಜೀವ ರಕ್ಷಣಾ ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಈ ಹಡಗು ಒಳಗೊಂಡಿದೆ. ಅಷ್ಟೇ ಅಲ್ಲದೆ, ಜಲಾಂತರ್ಗಾಮಿ ನೌಕೆಗಳು ಅಪಾಯಕ್ಕೆ ಸಿಲುಕಿದಾಗ ರಕ್ಷಣಾ ಕಾರ್ಯಕ್ಕೆ ಧಾವಿಸುವ ಪ್ರಮುಖ ಸಾಮರ್ಥ್ಯವನ್ನು ಇದು ಹೊಂದಿರಲಿದೆ.
ಅತ್ಯಾಧುನಿಕ ತಂತ್ರಜ್ಞಾನ
ಈ ವಿಶೇಷ ನೌಕೆಯಲ್ಲಿ ಅತ್ಯಾಧುನಿಕ ನೇವಿಗೇಷನ್ (ಸಂಚಾರ), ಪ್ಲಾಟ್‌ಫಾರ್ಮ್ ಮ್ಯಾನೇಜ್‌ಮೆಂಟ್ ಹಾಗೂ ಸಮುದ್ರದಲ್ಲಿ ಒಂದೇ ಸ್ಥಳದಲ್ಲಿ ಸ್ಥಿರವಾಗಿ ನಿಲ್ಲುವ ‘ಪ್ರಿಸೈಸ್ ಸ್ಟೇಷನ್ ಕೀಪಿಂಗ್’ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ನೀರೊಳಗಿನ ವೈದ್ಯಕೀಯ ಚಿಕಿತ್ಸೆ ಮತ್ತು ತಾಂತ್ರಿಕ ನೆರವಿನ ವಿಶೇಷ ಸೌಲಭ್ಯಗಳೂ ಇಲ್ಲಿವೆ. ‘ನಿಪುಣ್’ ಸೇರ್ಪಡೆಯಿಂದ ಭಾರತದ ಕಡಲ ಗಡಿಗಳ ಆಯಕಟ್ಟಿನ ಪ್ರದೇಶಗಳಲ್ಲಿ ಸಮುದ್ರದಾಳದ ಸವಾಲುಗಳನ್ನು ಎದುರಿಸಲು ನೌಕಾಪಡೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
ಇದನ್ನೂ ಓದಿ : IPL 2027ಕ್ಕೂ ಮುನ್ನ CSK ಮತ್ತು ಧೋನಿ ನಡುವೆ ಒಡೆತನದ ಬಿಕ್ಕಟ್ಟು : ಹಳದಿ ಪಡೆಯಲ್ಲಿ ‘ತಲಾ’ ಶಕೆ ಅಂತ್ಯ?



















