ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದ್ದ ನವವಿವಾಹಿತೆಯೊಬ್ಬರು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಮೂಲದ ಶ್ವೇತಾ (25) ಮೃತಪಟ್ಟ ದುರ್ದೈವಿ. ಇವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಪ್ರೀತಿಸಿದ ಯುವಕನ ಕೈಹಿಡಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವೈವಾಹಿಕ ಜೀವನ ಆರಂಭವಾದ ಕೆಲವೇ ತಿಂಗಳುಗಳಲ್ಲಿ ಈ ಘಟನೆ ನಡೆದಿರುವುದು ಕುಟುಂಬಸ್ಥರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಇನ್ನು, ಆತ್ಮಹತ್ಯೆಗೂ ಮುನ್ನ ಶ್ವೇತಾ ಅವರು ಡೆತ್‌ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಆ ಡೆತ್ ನೋಟ್‌ನಲ್ಲಿ ಗಂಡ ಮತ್ತು ಗಂಡನ ಅಕ್ಕ ತನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಅವರಿಂದ ನನಗೆ ಹಿಂಸೆ ಆಗುತ್ತಿದೆ. ಬದುಕೋಕೆ ಆಸೆಯೇ ಇಲ್ಲದಂತೆ ಮಾಡಿದ್ದಾರೆ. ನಾನು ಸತ್ತರೆ ಅವರನ್ನು ಮಾತ್ರ ಸುಮ್ಮನೇ ಬಿಡಬೇಡಿ ಅಮ್ಮ, ನನ್ನಿಂದ ತಪ್ಪು ಆಗಿದೆ ಕ್ಷಮಿಸಿ ಬಿಡು ಎಂದು ಡೆತ್ ನೋಟ್‌ನಲ್ಲಿ ಶ್ವೇತಾ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಶ್ವೇತಾಳ ಗಂಡ ಮತ್ತು ಗಂಡನ ಅಕ್ಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಪತ್ನಿ ಕರೆತರಲು ಬಂದ ಪತಿಯ ಹತ್ಯೆ ; ಕೌಟುಂಬಿಕ ಕಲಹ ದುರಂತದಲ್ಲಿ ಅಂತ್ಯ!



















