ನವದೆಹಲಿ : ಎಸ್ಐಆರ್ ಸೇರಿದಂತೆ ಹಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹೋರಾಟ ಆರಂಭಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವವನ್ನು ಹತ್ತಿಕ್ಕಲು ಆಡಳಿತಾರೂಢ ಬಿಜೆಪಿ ಭಾರಿ ತಂತ್ರ ಹೆಣೆದಿದೆ.
ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸೋಮವಾರ ದೇಶವ್ಯಾಪಿ ಜಿಲ್ಲಾ ಮಟ್ಟದ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ, ಬಿಜೆಪಿ ತನ್ನ 12 ರಾಜ್ಯಗಳ ಮುಖ್ಯಮಂತ್ರಿಗಳನ್ನು ಏಕಕಾಲಕ್ಕೆ ಮಾಧ್ಯಮಗೋಷ್ಠಿಗೆ ಇಳಿಸಿ ಕಾಂಗ್ರೆಸ್ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಲು ಸಜ್ಜುಗೊಳಿಸಿದೆ. ವಿಪಕ್ಷಗಳು ಯಾವುದೇ ಆಧಾರವಿಲ್ಲದೆ ಸಂವಿಧಾನಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಮತ್ತು ದೇಶದ ಇಮೇಜ್ ಹಾಳುಮಾಡಲು ಯತ್ನಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಮತ್ತು ಇತರ ಕೆಲವು ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ಕಳೆದ 10 ತಿಂಗಳುಗಳಲ್ಲಿ ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಕನಿಷ್ಠ 14 ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಧ್ಯಮ ವರದಿ ಬಹಿರಂಗಗೊಂಡ ಬೆನ್ನಲ್ಲೇ ಈ ವಿವಾದ ಸೃಷ್ಟಿಯಾಗಿದೆ.
ಈ ವರದಿಯನ್ನೇ ಆಧಾರವಾಗಿಟ್ಟುಕೊಂಡು ರಾಹುಲ್ ಗಾಂಧಿ, ಮತಗಳ ಕಳವು ಆರೋಪ ಸಾಬೀತಾಗಿದೆ ಎಂದು ಪ್ರತಿಪಾದಿಸಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ದೇಶದ್ರೋಹದ ಆಧಾರದಲ್ಲಿ ವಜಾಗೊಳಿಸಬೇಕೆಂದು ಆಗ್ರಹಿಸಿದ್ದರು. ಇತ್ತ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸುಮಾರು 1,000ಕ್ಕೂ ಹೆಚ್ಚು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರೊಂದಿಗೆ ವರ್ಚುವಲ್ ಸಭೆ ನಡೆಸಿ ದೇಶವ್ಯಾಪಿ ಸುದೀರ್ಘ ಪ್ರತಿಭಟನೆಗೆ ಕಾರ್ಯತಂತ್ರ ರೂಪಿಸಿದ್ದಾರೆ.
ಆಯೋಗದ ಸ್ಪಷ್ಟನೆ ಬಳಿಕ ಬಿಜೆಪಿಯ ಜಂಟಿ ಪ್ರತಿರೋಧ
ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಆಂತರಿಕ ಚರ್ಚೆಗಳ ಸಮಯದಲ್ಲಿ ವಿಭಿನ್ನ ಅಭಿಪ್ರಾಯಗಳು ಬರುವುದು ಸಹಜವಾದ ಪ್ರಕ್ರಿಯೆ. ಆದರೆ ಅಂತಿಮವಾಗಿ ತೆಗೆದುಕೊಳ್ಳಲಾದ ಎಲ್ಲಾ ನಿರ್ಧಾರಗಳು ಒಮ್ಮತದ ನಿರ್ಧಾರಗಳೇ ಆಗಿವೆ ಎಂದು ತಿಳಿಸಿದೆ. ಈ ಸತ್ಯಾಂಶವನ್ನು ಮರೆಮಾಚಿ ಕಾಂಗ್ರೆಸ್ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಬಿಜೆಪಿ ಆಪಾದಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, “ಯಾವುದೇ ಮತ ಕಳವಾಗಿಲ್ಲ, ರಾಹುಲ್ ಗಾಂಧಿ ಅವರ ಬುದ್ಧಿ ಕಳವಾಗಿದೆ” ಎಂದು ಲೇವಡಿ ಮಾಡಿದರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್‌ಐಆರ್ ಪ್ರಕ್ರಿಯೆಯ ಕುರಿತು ಕಾಂಗ್ರೆಸ್ ಅನಗತ್ಯ ಭೀತಿ ಹುಟ್ಟಿಸುತ್ತಿದೆ ಎಂದಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ‘ಇಂಡಿಯಾ’ ಕೂಟವನ್ನು ಸೋಲೊಪ್ಪಿಕೊಂಡವರ ಒಕ್ಕೂಟ ಎಂದು ಬಣ್ಣಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳಿಗೆ ಅಪಚಾರ ಎಂದ ನಾಯಕರು
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ರಾಹುಲ್ ಗಾಂಧಿ ಅವರ ನಡೆಗಳನ್ನು ತೀವ್ರವಾಗಿ ಖಂಡಿಸಿದ್ದು, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, “ಆಂತರಿಕ ಚರ್ಚೆಯ ಟಿಪ್ಪಣಿಗಳನ್ನು ಅಂತಿಮ ನಿರ್ಧಾರವೆಂದು ಬಿಂಬಿಸಿ ಸಂಸ್ಥೆಗಳ ಮೇಲೆ ಮಸಿ ಬಳಿಯುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ” ಎಂದು ಕಿಡಿಕಾರಿದ್ದಾರೆ.
ಬಿಹಾರ, ರಾಜಸ್ಥಾನ, ಛತ್ತೀಸ್‌ಗಢ, ಹರಿಯಾಣ, ಮಧ್ಯಪ್ರದೇಶ ಮತ್ತು ಗುಜರಾತ್ ಮುಖ್ಯಮಂತ್ರಿಗಳು ಕೂಡ ತಮ್ಮ ತಮ್ಮ ರಾಜ್ಯಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲೂ ವಿಪಕ್ಷ ನಾಯಕರು ಹಾಗೂ ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್‌ನ ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಕೊಹ್ಲಿಯ ಹೊಸ ಅವತಾರ ; ಅತಿವೇಗದಲ್ಲಿ 15 ಸಾವಿರ ಒಡಿಐ ರನ್ಗಳ ಸರದಾರ ಚೇಸ್ ಮಾಸ್ಟರ್!



















