ನವದೆಹಲಿ : ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್-ಯುಜಿ’ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಸುಳಿಯು ಇದೀಗ ಇಡೀ ಪರೀಕ್ಷೆಯನ್ನೇ ರದ್ದಾಗುವಂತೆ ಮಾಡಿದೆ. ಇಂಥ ಸಂದಿಗ್ಧದ ಹೊತ್ತಲ್ಲಿ ನೆರೆಯ ಚೀನಾ ತನ್ನ ಬೃಹತ್ ಪ್ರವೇಶ ಪರೀಕ್ಷೆಯಾದ ‘ಗಾವೋಕಾವೋ’ (Gaokao)ವನ್ನು ಹೇಗೆ ಅಭೇದ್ಯ ಕೋಟೆಯಂತೆ ಭದ್ರವಾಗಿ ನಡೆಸುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಸುಮಾರು 22 ಲಕ್ಷ ವಿದ್ಯಾರ್ಥಿಗಳು ನೀಟ್ ಬರೆದರೆ, ಚೀನಾದಲ್ಲಿ ಬರೋಬ್ಬರಿ 1.3 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಗಾವೋಕಾವೋ ಪರೀಕ್ಷೆ ಎದುರಿಸುತ್ತಾರೆ. ಇಷ್ಟೊಂದು ಬೃಹತ್ ಮಟ್ಟದ ಪರೀಕ್ಷೆಯನ್ನು ಚೀನಾ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಠಿಣ ಕಾನೂನುಗಳ ಮೂಲಕ ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆಸಿಕೊಂಡು ಬರುತ್ತಿದೆ.
ಚೀನಾ ಮಾದರಿ ಪ್ರಸ್ತಾಪಿಸಿದ ಆನಂದ್ ಕುಮಾರ್
ಭಾರತದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ನೀಟ್ ಪರೀಕ್ಷೆಯು ಪದೇ ಪದೇ ವಿವಾದಗಳಿಗೆ ಗುರಿಯಾಗುತ್ತಿದೆ. ಮೇ 3ರಂದು ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಕೇವಲ ಎಂಟು ದಿನಗಳಲ್ಲಿಯೇ ಸೋರಿಕೆಯಾದ ಆರೋಪ ಕೇಳಿಬಂದಿದ್ದು, ಪರೀಕ್ಷೆಯನ್ನು ಇದೀಗ ರದ್ದುಗೊಳಿಸಲಾಗಿದೆ. 2024ರಲ್ಲೂ ದೇಶವು ಇಂತಹದ್ದೇ ಬಿಕ್ಕಟ್ಟನ್ನು ಎದುರಿಸಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳ ಜೊತೆ ಚೆಲ್ಲಾಟವಾಡುತ್ತಿರುವ ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಖ್ಯಾತ ಗಣಿತಜ್ಞ ಹಾಗೂ ‘ಸೂಪರ್ 30’ ಸಂಸ್ಥಾಪಕ ಆನಂದ್ ಕುಮಾರ್ ಅವರು, “ಭಾರತದಲ್ಲೂ ಚೀನಾದ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಕೋಚಿಂಗ್ ಸೆಂಟರ್‌ಗಳ ಅಕ್ರಮಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ನೈತಿಕ ಸ್ಥೈರ್ಯ ಕುಗ್ಗುತ್ತದೆ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಏನಿದು ಭವಿಷ್ಯ ನಿರ್ಧರಿಸುವ ‘ಗಾವೋಕಾವೋ’?
ಚೀನಾದಲ್ಲಿ ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ನಡೆಯುವ ‘ಗಾವೋಕಾವೋ’ ವಿಶ್ವದ ಅತ್ಯಂತ ಕಠಿಣ ಹಾಗೂ ಬೃಹತ್ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ಚೀನಾದ ಶಿಕ್ಷಣ ಸಚಿವಾಲಯ ನಡೆಸುವ ಈ ಪರೀಕ್ಷೆಯು ಅಲ್ಲಿನ ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. ಉನ್ನತ ವಿಶ್ವವಿದ್ಯಾಲಯಗಳ ಪ್ರವೇಶ, ವೃತ್ತಿಜೀವನ ಮತ್ತು ಸಾಮಾಜಿಕ ಸ್ಥಾನಮಾನವನ್ನು ಈ ಪರೀಕ್ಷೆಯ ಅಂಕಗಳೇ ನಿರ್ಧರಿಸುತ್ತವೆ. 2025ರಲ್ಲಿ 1.33 ಕೋಟಿ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಚೀನೀ ಭಾಷೆ, ಗಣಿತ ಮತ್ತು ವಿದೇಶಿ ಭಾಷೆಗಳನ್ನು ಒಳಗೊಂಡಿರುವ ಈ ಪರೀಕ್ಷೆಯನ್ನು ಕಠಿಣತೆಯ ದೃಷ್ಟಿಯಿಂದ ಭಾರತದ ಜೆಇಇ (JEE) ಮತ್ತು ನೀಟ್ (NEET) ಪರೀಕ್ಷೆಗಳಿಗೆ ಹೋಲಿಸಲಾಗುತ್ತದೆ.
ಡ್ರೋನ್, ಎಐ ಮತ್ತು ಸ್ವಾಟ್ ಪಡೆಯ ಅಭೇದ್ಯ ಕಾವಲು
ಚೀನಾ ಸರ್ಕಾರವು ಗಾವೋಕಾವೋ ಪ್ರಶ್ನೆಪತ್ರಿಕೆಗಳನ್ನು ‘ರಾಜ್ಯದ ರಹಸ್ಯ’ (State Secrets) ಎಂದು ಪರಿಗಣಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳ ಹದ್ದಿನ ಕಣ್ಣಿರುವ ಅತಿ-ಸುರಕ್ಷಿತ ಸೌಲಭ್ಯಗಳು ಅಥವಾ ಕೆಲವೊಮ್ಮೆ ಜೈಲುಗಳಲ್ಲಿಯೇ ಈ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಲಾಗುತ್ತದೆ. ಬಳಿಕ ಸಶಸ್ತ್ರ ಪೊಲೀಸ್ ಬೆಂಗಾವಲು, ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಅತ್ಯಂತ ಭದ್ರತೆಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸುತ್ತಲೂ ಡ್ರೋನ್‌ಗಳು ಮತ್ತು ಚೀನಾದ ಗಣ್ಯ ಪೊಲೀಸ್ ಪಡೆಯಾದ ‘ಸ್ವಾಟ್’ (SWAT) ಕಮಾಂಡೋಗಳನ್ನು ನಿಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ಕೇಂದ್ರದೊಳಗೆ ಪ್ರವೇಶಿಸುವಾಗ ಮುಖದ ಗುರುತು (Facial Recognition), ಬೆರಳಚ್ಚು ಮತ್ತು ಕಣ್ಣಿನ ಐರಿಸ್ ಸ್ಕ್ಯಾನಿಂಗ್ ಕಡ್ಡಾಯ. ಪರೀಕ್ಷಾ ಕೊಠಡಿಯೊಳಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳು ವಿದ್ಯಾರ್ಥಿಗಳ ಪ್ರತಿಯೊಂದು ಚಲನವಲನಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸಿ, ಅನುಮಾನಾಸ್ಪದ ವರ್ತನೆಗಳನ್ನು ತಕ್ಷಣವೇ ಪತ್ತೆಹಚ್ಚುತ್ತವೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ವಿಮಾನ ಹಾರಾಟಕ್ಕೂ ಬ್ರೇಕ್
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಬಾರದಿರಲು ಚೀನಾ ಸರ್ಕಾರ ಅಚ್ಚರಿಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುತ್ತದೆ. ಪರೀಕ್ಷಾ ಕೇಂದ್ರಗಳ 500 ಮೀಟರ್ ವ್ಯಾಪ್ತಿಯಲ್ಲಿ ವಾಹನಗಳ ಹಾರ್ನ್ ಮಾಡುವುದನ್ನು ಮತ್ತು ನಿರ್ಮಾಣ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ವಿಮಾನಗಳ ಶಬ್ದವು ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟುಮಾಡಬಾರದು ಎಂಬ ಕಾರಣಕ್ಕೆ ಆಯಾ ಪ್ರಾಂತ್ಯಗಳಲ್ಲಿ ವಿಮಾನಗಳ ಹಾರಾಟದ ಮಾರ್ಗವನ್ನೇ ಬದಲಾಯಿಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ರೇಡಿಯೋ ಸಿಗ್ನಲ್ ಜಾಮರ್‌ಗಳನ್ನು ಅಳವಡಿಸಿ, ಯಾವುದೇ ರೀತಿಯ ಡಿಜಿಟಲ್ ನಕಲು ನಡೆಯದಂತೆ ತಡೆಯಲಾಗುತ್ತದೆ.
ಅಕ್ರಮಕ್ಕೆ ಕಠಿಣ ಶಿಕ್ಷೆ
ಪರೀಕ್ಷೆಯಲ್ಲಿ ನಕಲು ಮಾಡುವುದು ಅಥವಾ ಅಕ್ರಮವೆಸಗುವುದನ್ನು ಚೀನಾದಲ್ಲಿ ಗಂಭೀರ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಸಂಬಂಧ ಜಾರಿಗೆ ತಂದ ಕಠಿಣ ಕಾನೂನುಗಳ ಪ್ರಕಾರ, ಅಕ್ರಮದಲ್ಲಿ ಭಾಗಿಯಾದವರಿಗೆ ಮೂರರಿಂದ ಏಳು ವರ್ಷಗಳ ಕಾಲ ಜೈಲು ಶಿಕ್ಷೆ, ದಂಡ ಮತ್ತು ಭವಿಷ್ಯದಲ್ಲಿ ಪರೀಕ್ಷೆ ಬರೆಯದಂತೆ ನಿಷೇಧ ಹೇರಲಾಗುತ್ತದೆ. ಇಷ್ಟೆಲ್ಲಾ ಭದ್ರತೆಗಳಿದ್ದರೂ, ಗಾವೋಕಾವೋ ಪರೀಕ್ಷೆಯ ವಿಪರೀತ ಒತ್ತಡದಿಂದಾಗಿ ಚೀನಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗಿವೆ. 2022ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಗಳು ಹಬ್ಬಿದ್ದರೂ, ತನಿಖೆಯ ಬಳಿಕ ಅದು ಪರೀಕ್ಷೆ ನಡೆಯುವಾಗಲೇ ಮಾಡಿದ ನಕಲು ಕೃತ್ಯ ಮತ್ತು ನಕಲಿ ದಾಖಲೆ ಸೃಷ್ಟಿ ಎಂಬುದು ಸಾಬೀತಾಗಿತ್ತು. ಭಾರತೀಯ ಪರೀಕ್ಷಾ ವ್ಯವಸ್ಥೆಯು ಅಕ್ರಮಗಳ ಸುಳಿಯಲ್ಲಿ ಸಿಲುಕಿರುವ ಈ ಹೊತ್ತಿನಲ್ಲಿ, ಚೀನಾದ ಈ ಅಭೇದ್ಯ ಭದ್ರತಾ ಮಾದರಿಗಳು ಮತ್ತು ಕಠಿಣ ಕಾನೂನುಗಳು ಭಾರತಕ್ಕೂ ದಾರಿದೀಪವಾಗಬೇಕಿದೆ.
ಇದನ್ನೂ ಓದಿ : “ಚೆನ್ನೈ ಚೆಟ್ಟನ್” : ಲೋಕಲ್ ಬಾಯ್ಸ್ ಜೊತೆ ಬೀಚಲ್ಲಿ ಕ್ರಿಕೆಟ್ ಆಡಿ ಫ್ಯಾನ್ಸ್ ಮನಗೆದ್ದ ಸಂಜು ಸ್ಯಾಮ್ಸನ್!



















