ಮುಂಬೈ : ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ನ ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮತ್ತಷ್ಟು ಆಘಾತಕಾರಿ ವಿಚಾರಗಳು ಹೊರಬೀಳುತ್ತಿವೆ. ಉದ್ಯೋಗಿಯೊಬ್ಬರಿಗೆ ನೀಡಲಾದ ಮತ್ತು ಬರಿಸುವ ‘ಶೀರ್ ಕುರ್ಮಾ’ ಹಾಗೂ ಆರೋಪಿಯೊಬ್ಬನ ಮೊಬೈಲ್‌ನಲ್ಲಿದ್ದ ‘ಫೇಸ್ ಸ್ಕ್ಯಾನ್’ ಲಾಕ್ ಈ ಪ್ರಕರಣದ ಪ್ರಮುಖ ಕೊಂಡಿಗಳಾಗಿ ಹೊರಹೊಮ್ಮಿವೆ.
ಸಂತ್ರಸ್ತ ಉದ್ಯೋಗಿಯೊಬ್ಬರು ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಮತಾಂತರದ ಜಾಲಕ್ಕೆ ಸಿಲುಕಿಸುವ ಮುನ್ನ ಆರೋಪಿಗಳು ಅವರೊಂದಿಗೆ ಗಾಢ ಸ್ನೇಹ ಬೆಳೆಸಿದ್ದರು. ಈದ್ ಹಬ್ಬದಂದು ಏಳು ಮಂದಿ ಶಂಕಿತರ ಪೈಕಿ ಒಬ್ಬನಾದ ತೌಸಿಫ್ ಬಿಲಾಲ್ ಅತ್ತಾರ್ ತನ್ನ ಮನೆಗೆ ನನ್ನನ್ನೂ ಕರೆದಿದ್ದ. ಅಲ್ಲಿ ನೀಡಲಾದ ‘ಶೀರ್ ಕುರ್ಮಾ’ ತಿಂದ ನಂತರ ನನಗೆ ತೀವ್ರವಾದ ಮಂಪರು ಆವರಿಸಿ, ಪ್ರಜ್ಞೆ ತಪ್ಪಿದಂತಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ತದನಂತರ, ನನ್ನ ಕೌಟುಂಬಿಕ ಸಮಸ್ಯೆಗಳು ಮತ್ತು ಮಾನಸಿಕ ಖಿನ್ನತೆಯನ್ನು ಬಂಡವಾಳವಾಗಿ ಬಳಸಿಕೊಂಡ ಆರೋಪಿಗಳು, ಇದಕ್ಕೆ ಆಧ್ಯಾತ್ಮಿಕ ಪರಿಹಾರವೆಂದು ‘ಮಾಟಮಂತ್ರ’ದ (ಬ್ಲ್ಯಾಕ್ ಮ್ಯಾಜಿಕ್) ಮೊರೆ ಹೋಗುವಂತೆ ಪ್ರೇರೇಪಿಸಿದ್ದರು. ಇದೇ ನೆಪದಲ್ಲಿ, ನನ್ನ ಮೇಲೆ ಧಾರ್ಮಿಕ ಉಡುಪುಗಳನ್ನು ಧರಿಸುವಂತೆ ಒತ್ತಡ ಹೇರಿ, ವಿಡಿಯೋ ಚಿತ್ರೀಕರಣ ಮಾಡಿದ್ದರು. ಜೊತೆಗೆ, ಕಚೇರಿಯಲ್ಲಿ ವೃತ್ತಿಪರತೆಯನ್ನು ಹಾಳುಮಾಡಿ, ತಮ್ಮ ಮೇಲೆಯೇ ಹೆಚ್ಚು ಅವಲಂಬಿತರಾಗುವಂತೆ ಮಾಡಲು ಆರೋಪಿಗಳು ಮೇಲಧಿಕಾರಿಗಳಿಗೆ ನನ್ನ ಬಗ್ಗೆ ನಕಲಿ ನಕಾರಾತ್ಮಕ ವರದಿಗಳನ್ನು ಕಳುಹಿಸಿದ್ದರು ಎನ್ನಲಾಗಿದೆ. ಸಂತ್ರಸ್ತರಿಗೆ ಅವರ ಧಾರ್ಮಿಕ ನಂಬಿಕೆಗೆ ವಿರುದ್ಧವಾದ ಆಹಾರವನ್ನು ಬಲವಂತವಾಗಿ ತಿನ್ನಿಸಿದ ಹೋಟೆಲ್ ಕೂಡ ಇದೀಗ ಪೊಲೀಸರ ಕಣ್ಗಾವಲಿನಲ್ಲಿದೆ.
ತಾಂತ್ರಿಕ ಅಡೆತಡೆ ನಿವಾರಿಸಿದ ಫೇಸ್ ಐಡಿ
ಈ ಪ್ರಕರಣದಲ್ಲಿ ಕೇವಲ ಮತಾಂತರ ಮಾತ್ರವಲ್ಲದೆ, ಕಚೇರಿಯ ಹಲವು ಮಹಿಳಾ ಉದ್ಯೋಗಿಗಳು ಕೂಡ ತಮ್ಮ ಸಹೋದ್ಯೋಗಿಗಳಿಂದ ಕಿರುಕುಳಕ್ಕೊಳಗಾದ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಇದುವರೆಗೆ ಏಳು ಶಂಕಿತರನ್ನು ಬಂಧಿಸಿದ್ದು, 9 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಬಂಧಿತ ಏಳೂ ಮಂದಿಯನ್ನು ಟಿಸಿಎಸ್ ಅಮಾನತುಗೊಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪ್ರಮುಖ ಆರೋಪಿ ಡ್ಯಾನಿಶ್ ಶೇಖ್‌ನ ಮೊಬೈಲ್‌ನ ಹೈ-ಲೆವೆಲ್ ಡಿಜಿಟಲ್ ಭದ್ರತೆಯನ್ನು ಭೇದಿಸುವುದು ದೊಡ್ಡ ಸವಾಲಾಗಿತ್ತು.
ಆತ ಪ್ರತಿಯೊಂದು ಫೈಲ್ ಮತ್ತು ಅಪ್ಲಿಕೇಶನ್‌ಗಳಿಗೆ ಪ್ರತ್ಯೇಕ ಪಾಸ್‌ವರ್ಡ್ ಮತ್ತು ಫೇಸ್ ಐಡಿ ಅಳವಡಿಸಿದ್ದ. ಅಂತಿಮವಾಗಿ ನ್ಯಾಯಾಲಯದ ವಿಶೇಷ ಆದೇಶದ ಮೇರೆಗೆ, ಆರೋಪಿಯನ್ನು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಆರ್‌ಎಫ್‌ಎಸ್‌ಎಲ್) ಕರೆದೊಯ್ದು, ಆತನ ಫೇಸ್ ಐಡಿ ಬಳಸಿಯೇ ಸಾಧನವನ್ನು ಅನ್‌ಲಾಕ್ ಮಾಡಲಾಗಿದೆ. ಇದರೊಂದಿಗೆ, ಪ್ರಕರಣಕ್ಕೆ ಸಂಬಂಧಿಸಿದ ಅನೇಕ ಮಹತ್ವದ ಡಿಜಿಟಲ್ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಸಾಕ್ಷ್ಯಗಳ ಸಂಗ್ರಹ
ಸಂತ್ರಸ್ತನನ್ನು ಧಾರ್ಮಿಕ ಉಡುಗೆಯಲ್ಲಿ ನಿಲ್ಲಿಸಿ ತೆಗೆದಿದ್ದ ಫೋಟೋವೊಂದನ್ನು ‘ಟಿಸಿಎಸ್ ನಾಸಿಕ್’ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಇದು ಮತಾಂತರ ಪ್ರಕ್ರಿಯೆಯ ಪ್ರಮುಖ ಸಾಕ್ಷ್ಯವಾಗಿ ಪರಿಣಮಿಸಿದೆ. ವೈರಲ್ ಆಗಿರುವ ವಿಡಿಯೋಗಳಲ್ಲಿ ಕಂಡುಬಂದಿರುವ ಧಾರ್ಮಿಕ ಟೋಪಿಯನ್ನು ಖರೀದಿಸಿದ ಅಂಗಡಿಗಾಗಿ ತನಿಖಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ, ಸಂತ್ರಸ್ತ ಉದ್ಯೋಗಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ಯಲು ಬಳಸಿದ್ದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳುವ ಕಾರ್ಯವೂ ನಡೆಯುತ್ತಿದೆ.
ಮುಂಬೈ ಪೊಲೀಸರು ಕೋರ್ಟ್ ವಾರೆಂಟ್ ಮೂಲಕ ನಾಸಿಕ್ ರಸ್ತೆ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಮುಖ ಶಂಕಿತರಾದ ತೌಸಿಫ್ ಬಿಲಾಲ್ ಅತ್ತಾರ್, ಡ್ಯಾನಿಶ್ ಇಜಾಜ್ ಶೇಖ್, ಶಾರುಖ್ ಹುಸೇನ್ ಶೌಕತ್ ಖುರೇಷಿ ಮತ್ತು ರಜಾ ರಫೀಕ್ ಮೆಮನ್ ಅವರನ್ನು ಔಪಚಾರಿಕವಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ. ಈ ಮತಾಂತರ ಜಾಲದ ಹಿಂದಿರುವ ದೊಡ್ಡ ಜಾಲ ಮತ್ತು ಸಂಭಾವ್ಯ ಹಣಕಾಸಿನ ನೆರವಿನ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯವು ಆರೋಪಿಗಳನ್ನು ಏಪ್ರಿಲ್ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇದನ್ನೂ ಓದಿ : NCB ಕಸ್ಟಡಿಯಲ್ಲಿ BSF ಯೋಧ ಅನುಮಾನಾಸ್ಪದ ಸಾವು : ಮೃತದೇಹದ ಮೇಲೆ 34 ಗಾಯದ ಗುರುತು, ಚಿತ್ರಹಿಂಸೆ ಆರೋಪ!



















