ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸತತ ಎರಡು ಐಪಿಎಲ್ ಋತುಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ರಜತ್ ಪಾಟೀದಾರ್ ಅವರನ್ನು ಟೀಮ್ ಇಂಡಿಯಾದ ಟಿ20 ಬಳಗಕ್ಕೆ ಆಯ್ಕೆ ಮಾಡಲೇಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಬಲವಾದ ಸಂದೇಶ ರವಾನಿಸಿದ್ದಾರೆ.
ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿಯಂತಹ ದೈತ್ಯ ಆಟಗಾರರಿದ್ದರೂ ಈ ಹಿಂದೆ ಆರ್‌ಸಿಬಿಗೆ ಪ್ರಶಸ್ತಿ ಒಲಿದಿರಲಿಲ್ಲ. ಆದರೆ, ರಜತ್ ಪಾಟೀದಾರ್ ನಾಯಕತ್ವ ವಹಿಸಿಕೊಂಡ ಬಳಿಕ ತಂಡದ ಮನಸ್ಥಿತಿಯೇ ಬದಲಾಗಿದ್ದು, ಆಟಗಾರರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವ ಮೂಲಕ ಸತತ ಎರಡು ಬಾರಿ ಐಪಿಎಲ್ ಟ್ರೋಫಿ (2025 ಮತ್ತು 2026) ಗೆಲ್ಲಿಸಿಕೊಟ್ಟ ಅವರ ನಾಯಕತ್ವದ ಗುಣವನ್ನು ಕ್ಲಾರ್ಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪಿಎಲ್ 2026ರಲ್ಲಿ ಪಾಟೀದಾರ್ ಸ್ಫೋಟಕ ಬ್ಯಾಟಿಂಗ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಮಾತ್ರವಲ್ಲದೆ, ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಆಗಿಯೂ ರಜತ್ ಪಾಟೀದಾರ್ ಅತ್ಯಮೋಘ ಪ್ರದರ್ಶನ ನೀಡಿದ್ದಾರೆ. ಆಡಿದ 14 ಇನಿಂಗ್ಸ್‌ಗಳಲ್ಲಿ 41.75ರ ಸರಾಸರಿ ಹಾಗೂ 192.69ರ ಭರ್ಜರಿ ಸ್ಟ್ರೈಕ್‌ರೇಟ್‌ನಲ್ಲಿ 501 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಕ್ರೀಸ್‌ಗಿಳಿದು ಸ್ಫೋಟಕ ಬ್ಯಾಟಿಂಗ್ ನಡೆಸುವ ಅವರ ಶೈಲಿಯನ್ನು ಕೊಂಡಾಡಿರುವ ಕ್ಲಾರ್ಕ್, ಟಿ20 ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದು ಅತ್ಯಂತ ಕಠಿಣ. ಆದರೆ, ಪಾಟೀದಾರ್ ಆ ಸ್ಥಾನದಲ್ಲಿ ಕಣಕ್ಕಿಳಿದು ಎದುರಾಳಿ ಬೌಲರ್‌ಗಳ ಮೇಲೆ ಸಂಪೂರ್ಣ ಸವಾರಿ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ಹಾಗೂ ಅಜಿತ್ ಅಗರ್ಕರ್‌ಗೆ ಕ್ಲಾರ್ಕ್ ಕಿವಿಮಾತು
ಭಾರತದಲ್ಲಿ ಅಪಾರ ಪ್ರತಿಭೆಗಳಿದ್ದು, ಐಪಿಎಲ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವ ಕ್ಲಾರ್ಕ್, ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡದ ನಾಯಕನನ್ನು ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕಡೆಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರ ತಂಡದಲ್ಲಿದ್ದರೂ, ಎಲ್ಲರ ಗಮನ ಸೆಳೆದ ಪಾಟೀದಾರ್ ತಮ್ಮ ನಾಯಕತ್ವದ ಮೂಲಕ ಇತರ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿದ್ದರೂ, ಅವರ ಅದ್ಭುತ ಲಯ ಹಾಗೂ ನಾಯಕತ್ವದ ಗುಣಗಳನ್ನು ಪರಿಗಣಿಸಿ ಮುಂಬರುವ ಟಿ20 ಸರಣಿಗಳಲ್ಲಿ ಭಾರತ ತಂಡದಲ್ಲಿ ಕಡ್ಡಾಯವಾಗಿ ಸ್ಥಾನ ನೀಡಬೇಕು, ಹಾಗೂ ಏಕದಿನ ತಂಡಕ್ಕೂ ಅವರನ್ನು ಪರಿಗಣಿಸಬೇಕು ಎಂದು ಮೈಕೆಲ್ ಕ್ಲಾರ್ಕ್ ತಮ್ಮ ಪಾಡ್‌ಕಾಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಸೂರ್ಯವಂಶಿ ಅಬ್ಬರಕ್ಕೆ ಕಮ್ಮಿನ್ಸ್ ಫಿದಾ : 15 ವರ್ಷದ ವಿಸ್ಮಯ ಬಾಲಕನ ಕುರಿತು ಮಾತನಾಡಿದ ದಿಗ್ಗಜ!



















