ಬೆಂಗಳೂರು : ಐಪಿಎಲ್ನಲ್ಲಿ ಕಾಂಗರೂಗಳ ನಾಡಿನ ದಿಗ್ಗಜರಿಗೆ ಬೆವರಿದ ಇಳಿಸಿದ ಭಾರತೀಯ ಉದಯೋನ್ಮುಖ ಆಟಗಾರ, ಡೆಲ್ಲಿ ಕ್ಯಾಪಿಟಲ್ಸ್ನ ಸ್ಪೋಟಕ ಬ್ಯಾಟಿಂಗ್ ಆಲ್ರೌಂಡರ್ ಆಶುತೋಷ್ ಶರ್ಮಾ ಇದೀಗ ಇಂಗ್ಲೆಂಡ್ ದೇಶಿ ಕ್ರಿಕೆಟ್ನಲ್ಲಿ ಆಡಲು ಸಜ್ಜಾಗಿದ್ದಾರೆ. ಬ್ರಿಟನ್ನಲ್ಲಿ ನಡೆಯಲಿರುವ ಪ್ರತಿಷ್ಠಿತ ವನ್ ಡೇ ಕಪ್ ಟೂರ್ನಿಗಾಗಿ ಹ್ಯಾಂಪ್ಶೈರ್ ಕ್ರಿಕೆಟ್ ತಂಡ ಅವರನ್ನು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದೆ. ಈ ಬಾರಿ ಮಂಗಳವಾರ ಸ್ಕಾರ್ಬರೋದಲ್ಲಿ ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ಹ್ಯಾಂಪ್ಶೈರ್ ತಂಡ ಯಾರ್ಕ್ಶೈರ್ ತಂಡವನ್ನು ಎದುರಿಸಲಿದ್ದು, ಅದಕ್ಕೂ ಮುನ್ನವೇ ಆಶುತೋಷ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿರುವುದನ್ನು ಟ್ವಿಟರ್ (ಎಕ್ಸ್) ಮೂಲಕ ಖಚಿತಪಡಿಸಿದೆ.
ಐಪಿಎಲ್ ಸಾಧನೆಯಿಂದ ದಕ್ಕಿದ ಅವಕಾಶ
ಇದಕ್ಕೂ ಮುನ್ನ ಐಪಿಎಲ್ 2024ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ 27 ವರ್ಷದ ಆಶುತೋಷ್, ಆನಂತರ 2025 ಹಾಗೂ 2026ರ ಸೀಸನ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದರು. ಪ್ರಸಕ್ತ 2025ರ ಐಪಿಎಲ್ನಲ್ಲಿ 160.62 ಸ್ಟ್ರೈಕ್ ರೇಟ್ನಲ್ಲಿ 204 ರನ್ ಹಾಗೂ 2026ರಲ್ಲಿ 181.91 ಸ್ಟ್ರೈಕ್ ರೇಟ್ನಲ್ಲಿ 171 ರನ್ ಸಿಡಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ-ಮಾಲೀಕತ್ವವನ್ನು ಹೊಂದಿರುವ ‘ಜಿಎಂಆರ್ ಗ್ರೂಪ್’, ಹ್ಯಾಂಪ್ಶೈರ್ ತಂಡವನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಶುತೋಷ್ ತೋರಿದ ಈ ಅಮೋಘ ಆಟವನ್ನು ಗಮನಿಸಿರುವ ಹ್ಯಾಂಪ್ಶೈರ್, ಇದೀಗ ಒನ್ ಡೇ ಕಪ್ಗೆ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಹ್ಯಾಂಪ್ಶೈರ್ ಕ್ರಿಕೆಟ್ ನಿರ್ದೇಶಕರ ಮೆಚ್ಚುಗೆ
ಆಶುತೋಷ್ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿರುವ ಬಗ್ಗೆ ಹ್ಯಾಂಪ್ಶೈರ್ ಕ್ರಿಕೆಟ್ ನಿರ್ದೇಶಕ ಗೈಲ್ಸ್ ವೈಟ್ ಹರ್ಷ ವ್ಯಕ್ತಪಡಿಸಿದ್ದಾರೆ. “ಒನ್ ಡೇ ಕಪ್ ಟೂರ್ನಿಗಾಗಿ ಆಶುತೋಷ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ನಮಗೆ ಅತೀವ ಸಂತಸ ತಂದಿದೆ. ಅವರು ಅಪಾರ ಪ್ರತಿಭೆ ಹೊಂದಿರುವ ಆಟಗಾರ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ದೊಡ್ಡ ಮಟ್ಟದಲ್ಲಿ ಮಿಂಚಿದ್ದಾರೆ.
ಹೀಗಾಗಿ ಉನ್ನತ ಮಟ್ಟದ ಪೈಪೋಟಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಕಳೆದ ಬಾರಿ ಸ್ವಲ್ಪದರಲ್ಲೇ ಪ್ರಶಸ್ತಿ ಕೈತಪ್ಪಿತ್ತು, ಈ ಬಾರಿ ಅವರನ್ನು ತಂಡಕ್ಕೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಗೈಲ್ಸ್ ವೈಟ್ ತಿಳಿಸಿದ್ದಾರೆ. ಕಳೆದೆರಡು ಸೀಸನ್ಗಳಲ್ಲಿ ಹ್ಯಾಂಪ್ಶೈರ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಇದು ಕೂಡ ಒಂದಾಗಿದೆ.
ಯುಕೆಯಲ್ಲಿ ಆಡಿದ ಹಳೆಯ ಅನುಭವ
ಆಶುತೋಷ್ ಶರ್ಮಾ ಅವರಿಗೆ ಇಂಗ್ಲೆಂಡ್ ನೆಲದಲ್ಲಿ ಆಡುವುದು ಹೊಸತೇನಲ್ಲ. ಮಧ್ಯಪ್ರದೇಶ ಮೂಲದ ಈ ಯುವ ಪ್ರತಿಭೆ ಈ ಹಿಂದೆಯೇ ಅಲ್ಲಿನ ಹಲವು ಕ್ಲಬ್ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. 2017ರಲ್ಲೇ ಮಿಡ್ಲ್ಸೆಕ್ಸ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ಅವರು, 2022 ಮತ್ತು 2023ರ ಸೀಸನ್ಗಳಲ್ಲಿ ಗ್ರೇವ್ಸೆಂಡ್ ತಂಡದ ಭಾಗವಾಗಿದ್ದರು.
ಇನ್ನು 2025ರಲ್ಲಿ ಲಿವರ್ಪೂಲ್ ಲೀಗ್ನಲ್ಲಿ ವಿಗಾನ್ ಕ್ಲಬ್ ಪರ ಆಡಲು ಬ್ರಿಟನ್ಗೆ ಕಾಲಿಟ್ಟ ಕೇವಲ ಕೆಲವೇ ಗಂಟೆಗಳಲ್ಲಿ ಅಮೋಘ ಶತಕ ಸಿಡಿಸಿ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದರು. ಇದುವರೆಗೆ 21 ಲಿಸ್ಟ್-ಎ ಪಂದ್ಯಗಳನ್ನು ಆಡಿರುವ ಅವರು 458 ರನ್ ಕಲೆಹಾಕಿದ್ದಾರೆ. ಇದೀಗ ಆಶುತೋಷ್ ಜೊತೆಗೆ 23 ವರ್ಷದ ಯುವ ವೇಗಿ ಹ್ಯಾರಿ ಪೆಟ್ರಿ ಹಾಗೂ 19 ವರ್ಷದ ಆಲಿ ವಿಲಿಯಮ್ಸ್ ಅವರನ್ನೂ ಕೂಡ ಹ್ಯಾಂಪ್ಶೈರ್ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧದ ಸೋಲಿನ ಬೆನ್ನಲ್ಲೇ ಗಿಲ್ ಫಿಟ್ನೆಸ್ ಪ್ರಶ್ನಿಸಿದ ಇರ್ಫಾನ್ ಪಠಾಣ್!



















