ಬೆಂಗಳೂರು : ನಗರದ ನಾಗರಬಾವಿಯಲ್ಲಿರುವ ದುರ್ಗಾ ಶ್ರೀ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಈ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಒಟ್ಟು ಐವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೋಟೆಲ್ ಒಳಗೆ ಸಿಲುಕಿದ್ದವರನ್ನು ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಎಂದು ಗುರುತಿಸಲಾಗಿದೆ.
ದುರದೃಷ್ಟವಶಾತ್, ಅತಿಯಾದ ಹೊಗೆ ಸೇವನೆಯಿಂದ ಅಸ್ವಸ್ಥರಾಗಿದ್ದ 45 ವರ್ಷದ ರಾಜಕುಮಾರ್ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ದುರ್ಗಾ ಶ್ರೀ ಗ್ರ್ಯಾಂಡ್ ಮ್ಯಾನೇಜರ್ ಯತೀಶ್ ಹೇಳಿಕೆ :
ಬೆಳಿಗನ ಜಾವ ಈ ಘಟನೆ ನಡೆದಿದೆ. 30-35 ಜನ ಹೋಟೆಲ್ ನಲ್ಲಿ ಕೆಲಸ ಮಾಡ್ತಾ ಇದ್ರು, ಕೆಲಸಗಾರರು ಒಂದನೇ ಮಹಡಿಯಲ್ಲಿ ಮಲಗಿದ್ದರು. ಐವರು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಬೆಂಕಿ ಬಿದ್ದಿದ್ದೇ ಹೊರಗಡೆ ಬರೋಕೆ ಪ್ರಯತ್ನ ಮಾಡಿದ್ದಾರೆ, ಈ ವೇಳೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಮಾತ್ರ ಹೊಗೆಯಿಂದ ಉಸಿರಾಡಲು ಆಗಿಲ್ಲ, ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ, ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ. ಮೃತ ರಾಜಕುಮಾರ್ 15 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ, ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಆಗಿರಬಹುದು, ಪೊಲೀಸರು ಬಂದಿದ್ರೂ ತನಿಖೆ ಮಾಡ್ತಾ ಇದ್ದಾರೆ ಎಂದು ಮ್ಯಾನೇಜರ್ ಯತೀಶ್ ಹೇಳಿದ್ದಾರೆ.
ಇದನ್ನೂ ಓದಿ : ಕೋವಿಡ್ ನಂತರ ಜಗತ್ತಿಗೀಗ ಹಂಟಾವೈರಸ್ ಭೀತಿ : ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?



















