ಮುಂಬೈ : ಅಕ್ರಮ ಸಂಬಂಧದ ಶಂಕೆಯು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಲಾದ ವ್ಯಕ್ತಿಯನ್ನು ಮನೆಗೆ ಮದ್ಯಪಾನದ ಕೂಟಕ್ಕೆ ಆಹ್ವಾನಿಸಿದ ಪತಿಯೊಬ್ಬ, ಪತ್ನಿಯ ಕಣ್ಣೆದುರೇ ಆತನ ಗಂಟಲು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ 48 ವರ್ಷದ ಭೀಮರಾಜ್ ಓಂಪ್ರಕಾಶ್ ಶರ್ಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೃತನನ್ನು ವಿಕಾಸ್ ಅಶೋಕ್ ಭೂಸಾರೆ ಎಂದು ಗುರುತಿಸಲಾಗಿದೆ. ಬುಧವಾರ ಆರೋಪಿ ಭೀಮರಾಜ್ ತನ್ನ ಮನೆಗೆ ವಿಕಾಸ್‌ನನ್ನು ಮದ್ಯಪಾನ ಮಾಡಲು ಆಹ್ವಾನಿಸಿದ್ದ. ಆರೋಪಿ, ಆತನ ಪತ್ನಿ ಮತ್ತು ವಿಕಾಸ್ ಮೂವರೂ ಒಟ್ಟಾಗಿ ಕುಳಿತು ಮದ್ಯ ಸೇವಿಸಿದ್ದರು. ಈ ವೇಳೆ ಪತ್ನಿಯ ಜೊತೆಗಿನ ಸಂಬಂಧದ ವಿಷಯವಾಗಿ ಮಾತಿನ ಚಕಮಕಿ ಆರಂಭವಾಗಿದೆ. “ನೀನು ಪದೇ ಪದೇ ನನ್ನ ಮನೆಗೆ ಏಕೆ ಬರುತ್ತೀಯ? ಇನ್ನು ಮುಂದೆ ಇಲ್ಲಿಗೆ ಬರಬಾರದು” ಎಂದು ಭೀಮರಾಜ್ ಏಕಾಏಕಿ ವಿಕಾಸ್‌ಗೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ಪತ್ನಿಯ ಕಣ್ಣೆದುರೇ ಬರ್ಬರ ಹತ್ಯೆ
ಈ ಮಾತುಕತೆಯು ಒಂದು ಹಂತದಲ್ಲಿ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಭೀಮರಾಜ್, ಇದ್ದಕ್ಕಿದ್ದಂತೆ ಚಾಕು ತೆಗೆದು ವಿಕಾಸ್ ಮೇಲೆ ಸತತವಾಗಿ ದಾಳಿ ನಡೆಸಿದ್ದಾನೆ. ಪತ್ನಿಯು ನೋಡನೋಡುತ್ತಿದ್ದಂತೆಯೇ ಆಕೆಯ ಕಣ್ಣೆದುರೇ ವಿಕಾಸ್‌ನ ಗಂಟಲು ಸೀಳಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ವಿಕಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂರು ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಿರುಕುಳದ ಆರೋಪ
ಪೊಲೀಸ್ ವಿಚಾರಣೆಯ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮೃತ ವಿಕಾಸ್ ಈ ಹಿಂದೆಯೂ ಆರೋಪಿಯ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಎಚ್ಚರಿಕೆ ನೀಡಿದರೂ ಸಹ ಆಕೆಯನ್ನು ಭೇಟಿಯಾಗುವುದನ್ನು ಮುಂದುವರಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇದನ್ನೂ ಓದಿ : ‘ಜೈಲರ್ 2’ ಸೆಟ್‌ನಲ್ಲಿ ದುರಂತ ; ವಿದ್ಯುತ್ ಶಾಕ್‌ನಿಂದ ಯುವ ಕಾರ್ಮಿಕ ಸಾವು!



















