ಬೆಂಗಳೂರು : ನಗರದಲ್ಲಿ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿದ ಸಿಸಿಬಿ ಪೊಲೀಸರು, ಲಗೇಜ್ ಬ್ಯಾಗ್‌ಗಳಲ್ಲಿ ಅಡಗಿಸಿಕೊಂಡು ಎಂಡಿಎಂಎ ಕ್ರಿಸ್ಟಲ್ ಸಾಗಿಸುತ್ತಿದ್ದ ಮೂವರು ನೈಜೀರಿಯಾ ಮೂಲದ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ ₹21 ಕೋಟಿ ಮೌಲ್ಯದ 10 ಕೆಜಿ 270 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತರಿಂದ ನಾಲ್ಕು ಮೊಬೈಲ್ ಫೋನ್‌ಗಳು, ಎರಡು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಇತರೆ ವಸ್ತುಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲಕೊನೆಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪೊಲೀಸರ ತನಿಖೆ ಪ್ರಕಾರ, ಆರೋಪಿಗಳು ನೈಜೀರಿಯಾದ ಇತರ ಡ್ರಗ್ ಪೆಡ್ಲರ್‌ಗಳಿಂದ ಎಂಡಿಎಂಎ ಕ್ರಿಸ್ಟಲ್ ಅನ್ನು ಬೆಂಗಳೂರಿಗೆ ತಂದು, ಬಾಡಿಗೆ ಮನೆಯಿಂದಲೇ ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನೂ ಬಂಧಿಸಿದ್ದಾರೆ. ಆರೋಪಿಗಳು ಮೆಡಿಕಲ್ ಹಾಗೂ ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದ ನಂತರವೂ ಬೆಂಗಳೂರಿನಲ್ಲಿ ಅನಧಿಕೃತವಾಗಿ ವಾಸವಾಗಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಗಳ ಜಾಲದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಡ್ರಗ್ಸ್ ಪೂರೈಕೆ ಜಾಲದ ಇತರ ಸದಸ್ಯರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ : ಹೊಟ್ಟೆಯಲ್ಲಿರುವ ಮಗುವಿಗೆ ಡಿಎನ್‌ಎ ಪರೀಕ್ಷೆಗೆ ಪಟ್ಟು : ಗಂಡನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಆತ್ಮಹತ್ಯೆ


















