ಬೆಂಗಳೂರು : ನಗರದ ಸಂಪಿಗೆಹಳ್ಳಿಯಲ್ಲಿ ಅಂಡರ್ ಕನ್‌ಸ್ಟ್ರಕ್ಷನ್ ಅಪಾರ್ಟ್‌ಮೆಂಟ್ ಮೇಲಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ವಿವೇಕಾನಂದ (45) ಎಂದು ಗುರುತಿಸಲಾಗಿದೆ. ಫ್ಲ್ಯಾಟ್ ಖರೀದಿ ಮಾಡುವ ಉದ್ದೇಶದಿಂದ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಅವರು, ಮೇಲ್ಮಹಡಿಗೆ ತೆರಳಿ 13ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ವಿವೇಕಾನಂದ ಅವರು ಐದಾರು ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲಗಾರರ ಒತ್ತಡದಿಂದ ಬೇಸತ್ತು ಈ ಕೃತ್ಯಕ್ಕೆ ಮುಂದಾಗಿರುವ ಶಂಕೆ ವ್ಯಕ್ತವಾಗಿದೆ. ಸಾಲಗಾರರು ಹಣ ವಾಪಸ್ ನೀಡುವಂತೆ ಒತ್ತಡ ಹಾಕುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಸಾಲಗಾರರು ಆಕ್ರೋಶ ವ್ಯಕ್ತಪಡಿಸಿ, ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇನ್ನೊಂದೆಡೆ, ಸಾಲಗಾರರ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ. ಈ ಕುರಿತು ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಬಂದಿಲ್ಲ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ!


















