ಮುಂಬೈ : ಬಾಲಕಿಯರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದ ಬೃಹತ್ ಲೈಂಗಿಕ ದೌರ್ಜನ್ಯ ಜಾಲವೊಂದನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಭೇದಿಸಲಾಗಿದೆ. ಕನಿಷ್ಠ 180 ಮಂದಿ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಿ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಗಂಭೀರ ಆರೋಪದ ಮೇಲೆ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಸಂಸದರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಎಚ್ಚೆತ್ತ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
‘ಲವ್ ಟ್ರ್ಯಾಪ್’ ಜಾಲ
ಪರತ್ವಾಡಾ ನಗರದ ನಿವಾಸಿಯಾಗಿರುವ ಆರೋಪಿ ಮೊಹಮ್ಮದ್ ಅಯಾಜ್, ವ್ಯವಸ್ಥಿತವಾಗಿ ಅಪ್ರಾಪ್ತ ಬಾಲಕಿಯರನ್ನು ‘ಲವ್ ಟ್ರ್ಯಾಪ್’ (ಪ್ರೇಮಪಾಶ)ಗೆ ಬೀಳಿಸಿಕೊಳ್ಳುತ್ತಿದ್ದ. ವಾಟ್ಸ್ಆ್ಯಪ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಬಾಲಕಿಯರನ್ನು ಸಂಪರ್ಕಿಸಿ, ನಿಧಾನಕ್ಕೆ ಪರಿಚಯ ಬೆಳೆಸಿಕೊಳ್ಳುತ್ತಿದ್ದ ಈತ, ಬಳಿಕ ಅವರನ್ನು ಪುಣೆ ಹಾಗೂ ಮುಂಬೈಗೆ ಕರೆದೊಯ್ದು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದ. ಈ ವಿಡಿಯೋಗಳನ್ನು ಮುಂದಿಟ್ಟುಕೊಂಡು ಸಂತ್ರಸ್ತೆಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನಲ್ಲದೆ, ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಎಂಬ ಆಘಾತಕಾರಿ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಈ ಪೈಕಿ ಕೆಲವು ವಿಡಿಯೋಗಳನ್ನು ಆನ್‌ಲೈನ್‌ನಲ್ಲೂ ಹರಿಬಿಡಲಾಗಿದೆ.
ಎಸ್‌ಐಟಿ ತನಿಖೆಗೆ ಬಿಜೆಪಿ ಆಗ್ರಹ
ಪ್ರಕರಣದ ಗಂಭೀರತೆಯನ್ನು ಅರಿತ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ನಾಯಕ ಅನಿಲ್ ಬೋಂಡೆ ಅವರು ಅಮರಾವತಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ವಿಶಾಲ್ ಆನಂದ್ ಅವರಿಗೆ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸದಿದ್ದರೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಸಹ ಪೊಲೀಸ್ ಠಾಣೆಗೆ ಭೇಟಿ ನೀಡಿ ಒತ್ತಾಯಿಸಿದ್ದಾರೆ. ಈ ಮೂಲಕ ಈ ಕೃತ್ಯದಿಂದ ತಮ್ಮ ಸಮುದಾಯದ ಹೆಸರಿಗೆ ಕಳಂಕ ಬರುವುದನ್ನು ತಪ್ಪಿಸಬೇಕೆಂದು ಎಂದೂ ಮನವಿ ಮಾಡಿದ್ದಾರೆ.
ಆರೋಪಿಯ ರಾಜಕೀಯ ನಂಟು
ಬಂಧಿತ ಆರೋಪಿ ಮೊಹಮ್ಮದ್ ಅಯಾಜ್ ಈ ಹಿಂದೆ ಎಐಎಂಐಎಂ (AIMIM) ಪಕ್ಷದ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾನೆ ಎನ್ನಲಾಗಿದೆ. ಆತ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಎಐಎಂಐಎಂ ಅಮರಾವತಿ ಘಟಕದ ಅಧ್ಯಕ್ಷ ಹಾಜಿ ಇರ್ಫಾನ್ ಖಾನ್ ಅವರಿಂದ ಪತ್ರ ಸ್ವೀಕರಿಸುತ್ತಿರುವ ಹಾಗೂ ಪಕ್ಷದ ರ‍್ಯಾಲಿಗಳಲ್ಲಿ ಪಾಲ್ಗೊಂಡಿರುವ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇನ್‌ಸ್ಟಾಗ್ರಾಮ್‌ನಿಂದ ಅಂತಹ ಹಲವು ವಿಡಿಯೋಗಳನ್ನು ಅಳಿಸಿಹಾಕಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿರುವ ಪೊಲೀಸರು, ಅದರಲ್ಲಿರುವ ಆಕ್ಷೇಪಾರ್ಹ ವಿಡಿಯೋಗಳನ್ನು ಆಧರಿಸಿ ಸೈಬರ್ ಸೆಲ್ ನೆರವಿನೊಂದಿಗೆ ತನಿಖೆ ಚುರುಕುಗೊಳಿಸಿದ್ದಾರೆ. ಈ ವಿಡಿಯೋಗಳನ್ನು ಆತ ಇತರರೊಂದಿಗೆ ಅಥವಾ ಯಾವುದಾದರೂ ಅಪರಾಧ ಜಾಲದೊಂದಿಗೆ ಹಂಚಿಕೊಂಡಿದ್ದಾನೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : RCB ಅಭಿಮಾನಿಗಳಿಗೆ ಗುಡ್ ನ್ಯೂಸ್ : ಲಕ್ನೋ ವಿರುದ್ಧದ ಪಂದ್ಯಕ್ಕೆ ವಿರಾಟ್ ಕೊಹ್ಲಿ ಸಜ್ಜು!


















