ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿದ್ದು, ಇಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆದರೆ, 2023ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಪರವಾಗಿ ಕಣಕ್ಕಿಳಿದಿದ್ದ ಬಾಂಗ್ಲಾದೇಶದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಲಿಟನ್ ದಾಸ್,
ತಮ್ಮ ಐಪಿಎಲ್ ಅನುಭವದ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ಕ್ರಿಕೆಟ್‌ನ ‘ಚಾರ್ ಚೊಕ್ಕಾ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಕೋಲ್ಕತ್ತಾ ಫ್ರಾಂಚೈಸಿ ಕಡೆಯಿಂದ ತಮಗೆ ಯಾವುದೇ ರೀತಿಯ ಸಂವಹನ ಮತ್ತು ಬೆಂಬಲ ಸಿಗಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೆಕೆಆರ್ ತಂಡದಲ್ಲಿ ತಮಗೆ ಸಿಕ್ಕ ಅವಕಾಶ ಮತ್ತು ಅಲ್ಲಿನ ವಾತಾವರಣದ ಕುರಿತು ಮಾತನಾಡಿದ ಲಿಟನ್ ದಾಸ್, ಆ ತಂಡದಲ್ಲಿ ನನ್ನ ಅಗತ್ಯವಿರಲಿಲ್ಲ ಎಂದೇ ನನಗೆ ಅನಿಸಿತ್ತು. ನಾನು ನಿರೀಕ್ಷಿಸಿದ ರೀತಿಯಲ್ಲಿ ಫ್ರಾಂಚೈಸಿಯಾಗಲೀ, ಟೀಮ್ ಮ್ಯಾನೇಜ್‌ಮೆಂಟ್ ಆಗಲೀ ನನಗೆ ಬೆಂಬಲ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಪಂದ್ಯದಲ್ಲಿ ಆಡುವ ಬಳಗದ (ಪ್ಲೇಯಿಂಗ್ ಎಲೆವೆನ್) ಬಗ್ಗೆ ಆಟಗಾರರಿಗೆ ಮುಂಚಿತವಾಗಿಯೇ ಮಾಹಿತಿ ನೀಡುವ ಸಾಮಾನ್ಯ ಪ್ರಕ್ರಿಯೆಯೂ ಅಲ್ಲಿ ನಡೆದಿರಲಿಲ್ಲ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
ಸಾಮಾನ್ಯವಾಗಿ ಆಟಗಾರನೊಬ್ಬ ಮುಂದಿನ ಪಂದ್ಯದಲ್ಲಿ ಆಡುತ್ತಾನೆಯೇ ಇಲ್ಲವೇ ಎಂಬುದನ್ನು ಹಿಂದಿನ ದಿನವೇ ತಿಳಿಸಲಾಗುತ್ತದೆ. ಆದರೆ, ನಾನು ಮೊದಲ ಎರಡು ಪಂದ್ಯಗಳಲ್ಲಿ ಹೊರಗುಳಿದಿದ್ದೆ ಮತ್ತು ನನ್ನೊಂದಿಗೆ ಈ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ. ಅಚ್ಚರಿ ಎಂಬಂತೆ ರಾತ್ರಿ 11 ಗಂಟೆಗೆ ‘ನೀವು ನಾಳೆಯ ಪಂದ್ಯವನ್ನು ಆಡುತ್ತಿದ್ದೀರಿ’ ಎಂಬ ಸಂದೇಶವೊಂದು ಬಂತು. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ, ಕೊನೆಯ ಕ್ಷಣದಲ್ಲಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಲಿಟನ್ ದಾಸ್ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ನಾಲ್ಕು ರನ್ಗೆ ಔಟಾಗಿದ್ದರು :
ಅಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಆ ಏಕೈಕ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಲಿಟನ್ ದಾಸ್, ಕೇವಲ ನಾಲ್ಕು ಎಸೆತಗಳನ್ನು ಎದುರಿಸಿ ನಾಲ್ಕು ರನ್ ಗಳಿಸಿ ಔಟಾಗಿದ್ದರು. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ವಿಕೆಟ್ ಕೀಪಿಂಗ್‌ನಲ್ಲೂ ಅವರು ಎರಡು ಮಹತ್ವದ ಸ್ಟಂಪಿಂಗ್ ಅವಕಾಶಗಳನ್ನು ಕೈಚೆಲ್ಲಿದ್ದರು. ಇದು ಕೆಕೆಆರ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ನನ್ನಲ್ಲಿ ಉಳಿದಿದ್ದ ಅಲ್ಪಸ್ವಲ್ಪ ಶಕ್ತಿಯನ್ನು ಉಪಯೋಗಿಸಿ ನಾನು ಆಡಲು ಯತ್ನಿಸಿದೆ. ಕ್ರಿಕೆಟ್‌ನಲ್ಲಿ ಕೆಲವು ದಿನಗಳು ನಮ್ಮದಾಗಿರುವುದಿಲ್ಲ, ಆ ದಿನ ನನಗೂ ಹಾಗೆಯೇ ಆಯಿತು ಎಂದು ಅವರು ತಮ್ಮ ಪ್ರದರ್ಶನವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಪಂದ್ಯದ ನಂತರ ಅವರನ್ನು ಆಡುವ ಬಳಗದಿಂದ ಕೈಬಿಡಲಾಯಿತು. ಬಳಿಕ ಕೌಟುಂಬಿಕ ಕಾರಣಗಳನ್ನು ನೀಡಿ ಅವರು ತವರಿಗೆ ಮರಳಿದ್ದರು. 40 ಲಕ್ಷ ರೂಪಾಯಿಗಳ ಮೂಲಬೆಲೆಗೆ ಕೆಕೆಆರ್ ಪಾಲಾಗಿದ್ದ ಲಿಟನ್ ದಾಸ್ ಅವರ ಐಪಿಎಲ್ ಪಯಣ ಕೇವಲ ಒಂದು ಪಂದ್ಯಕ್ಕೆ ಅಂತ್ಯವಾಗಿತ್ತು.
ಆ ಆವೃತ್ತಿಯಲ್ಲಿ ಕೆಕೆಆರ್ ತಂಡವು ನಿರಂತರ ವೈಫಲ್ಯಗಳನ್ನು ಅನುಭವಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಮುಂದಿನ ಋತುವಿನಲ್ಲಿ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಅದ್ಭುತವಾಗಿ ಪುಟಿದೆದ್ದ ಕೆಕೆಆರ್, ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಆದರೆ ಲಿಟನ್ ದಾಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು ಮತ್ತು ಹರಾಜಿನಲ್ಲಿ ಅವರು ಬಿಕಾರಿಯಾಗದೆ ಉಳಿದಿದ್ದರು. ಪ್ರಸ್ತುತ ಐಪಿಎಲ್ ಟೂರ್ನಿಗಳಲ್ಲಿ ಬಾಂಗ್ಲಾದೇಶದ ಆಟಗಾರರ ಪ್ರಾತಿನಿಧ್ಯ ತೀರಾ ಕಡಿಮೆಯಾಗಿದ್ದು, ಲಿಟನ್ ದಾಸ್ ಅವರ ಈ ಹೇಳಿಕೆಗಳು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
ಇದನ್ನೂ ಓದಿ : ಜೋಫ್ರಾ ಆರ್ಚರ್ ಐಪಿಎಲ್ ವಾಸ್ತವ್ಯಕ್ಕೆ ಮೈಕಲ್ ವಾನ್ ತೀವ್ರ ಆಕ್ಷೇಪ!


















