ಬೆಂಗಳೂರು : ವಿಶ್ವದಾದ್ಯಂತ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳು ದಿನೇ ದಿನೇ ಜನಪ್ರಿಯತೆ ಗಳಿಸುತ್ತಿರುವುದು ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೇಲೆ ಅದರಲ್ಲೂ ವಿಶೇಷವಾಗಿ ಏಕದಿನ ಕ್ರಿಕೆಟ್ ಸ್ವರೂಪದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಮ್ಯಾಥ್ಯೂ ಹೇಡನ್ ಕಳವಳ ವ್ಯಕ್ತಪಡಿಸಿದ್ದಾರೆ. ಟಿ20 ಹಾಗೂ ಫ್ರಾಂಚೈಸಿ ಲೀಗ್‌ಗಳ ಅಬ್ಬರದ ನಡುವೆ ಏಕದಿನ ಕ್ರಿಕೆಟ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಐಸಿಸಿ ಕಠಿಣ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಶ್ವ ಕ್ರಿಕೆಟ್ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಫ್ರಾಂಚೈಸಿ ಆಧಾರಿತ ಪಂದ್ಯಾವಳಿಗಳು ಕ್ರಿಕೆಟ್ ಕ್ಯಾಲೆಂಡರ್‌ನ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದ ಇತರ ಕ್ರೀಡೆಗಳಂತೆ ಕ್ರಿಕೆಟ್ ಕೂಡ ಕ್ಲಬ್ ಆಧಾರಿತ ಪಂದ್ಯಾವಳಿಗಳತ್ತ ಸಾಗುತ್ತಿರುವುದು ಅಚ್ಚರಿಯೇನಲ್ಲ. ಆದರೆ ಈ ಬೆಳವಣಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹೊಸ ಸವಾಲನ್ನು ಒಡ್ಡಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಅಂಗಸಂಸ್ಥೆಗಳು ಹಾಗೂ ಪ್ರಮುಖ ಟೆಸ್ಟ್ ಆಡುವ ರಾಷ್ಟ್ರಗಳೊಂದಿಗೆ ಸೇರಿ ಫ್ರಾಂಚೈಸಿ ಲೀಗ್‌ಗಳ ಬೆಳೆಯುತ್ತಿರುವ ಅಬ್ಬರವನ್ನು ಸಮತೋಲನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.
ಏಕದಿನ ಹಾಗೂ ದ್ವಿಪಕ್ಷೀಯ ಸರಣಿಗಳ ಭವಿಷ್ಯದ ಬಗ್ಗೆ ಆತಂಕ
ಇತ್ತೀಚಿನ ದಿನಗಳಲ್ಲಿ ಆಟಗಾರರು ಫ್ರಾಂಚೈಸಿ ಲೀಗ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಇದರಿಂದ ಏಕದಿನ ಕ್ರಿಕೆಟ್ (ODI) ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ ಎಂದು ಹೇಡನ್ ಆತಂಕ ವ್ಯಕ್ತಪಡಿಸಿದ್ದಾರೆ. ದ್ವಿಪಕ್ಷೀಯ ಸರಣಿಗಳು ಕೂಡ ಕಳೆದ ಹಲವು ವರ್ಷಗಳಿಂದ ತನ್ನ ಹಿಂದಿನ ವರ್ಚಸ್ಸನ್ನು ಕಳೆದುಕೊಳ್ಳುತ್ತಿವೆ. ಭಾರತ-ಆಸ್ಟ್ರೇಲಿಯಾ, ಅಥವಾ ಆಸ್ಟ್ರೇಲಿಯಾ-ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾದಂತಹ ಕೆಲವು ಪ್ರಮುಖ ಸರಣಿಗಳು ಮಾತ್ರ ಜಾಗತಿಕ ಮಟ್ಟದಲ್ಲಿ ಭಾರೀ ಗಮನ ಸೆಳೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮೂಲಕ ಟೆಸ್ಟ್ ಕ್ರಿಕೆಟ್ ಕಡೆಗೆ ಅಭಿಮಾನಿಗಳ ಆಸಕ್ತಿ ಮರುಕಳಿಸಿದೆ, ಆದರೆ ಏಕದಿನ ಕ್ರಿಕೆಟ್ ಸ್ವರೂಪದ ಮೇಲೆ ಅನೇಕ ಪ್ರಶ್ನಾರ್ಥಕ ಚಿಹ್ನೆಗಳಿದ್ದು, ಇದು ಗಂಭೀರವಾದ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ.
ಐಸಿಸಿ ಮುಂದಿರುವ ಜವಾಬ್ದಾರಿ ಹಾಗೂ ಸಮತೋಲನದ ಪಾಠ
ಕ್ರಿಕೆಟ್ ಜಗತ್ತಿನಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಬಲಿಷ್ಠ ರಾಷ್ಟ್ರಗಳ ಪ್ರಾಬಲ್ಯ ಹೆಚ್ಚಿರುವ ಸಂದರ್ಭದಲ್ಲಿ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಹಾಗೂ ಶ್ರೀಲಂಕಾದಂತಹ ಪ್ರಮುಖ ತಂಡಗಳು ಹಿಂದೆ ಬಿದ್ದಿವೆ. ಈ ತಂಡಗಳನ್ನು ರಕ್ಷಿಸುವುದು ಕೂಡ ಅಷ್ಟೇ ಮುಖ್ಯ ಎಂದು ಹೇಡನ್ ಹೇಳಿದ್ದಾರೆ.
ಪ್ರಪಂಚದ ಹೊಸ ಭಾಗಗಳಿಗೆ ಕ್ರಿಕೆಟ್ ಅನ್ನು ಕೊಂಡೊಯ್ಯುತ್ತಿರುವ, ಪುಟ್ಟ ಮಕ್ಕಳನ್ನು ಬ್ಯಾಟ್-ಬಾಲ್ ಹಿಡಿಯುವಂತೆ ಪ್ರೇರೇಪಿಸುತ್ತಿರುವ ಫ್ರಾಂಚೈಸಿ ಕ್ರಿಕೆಟ್‌ನ ಬಗ್ಗೆ ತನಗೆ ವಿರೋಧವಿಲ್ಲ ಎಂದಿರುವ ಹೇಡನ್, ಕೇವಲ ಫ್ರಾಂಚೈಸಿ ಕ್ರಿಕೆಟ್‌ನತ್ತ ಮಾತ್ರವೇ ಗಮನ ಕೇಂದ್ರೀಕರಿಸಬಾರದು ಎಂದು ಎಚ್ಚರಿಸಿದ್ದಾರೆ. ಎಲ್ಲ ಸ್ವರೂಪದ ಕ್ರಿಕೆಟ್‌ಗಳನ್ನು ಉಳಿಸಿಕೊಳ್ಳಲು ಐಸಿಸಿ ಹಾಗೂ ಕ್ರಿಕೆಟ್ ಮಂಡಳಿಗಳು ಸರಿಯಾದ ರೂಪರೇಷೆಗಳನ್ನು ಸಿದ್ಧಪಡಿಸಬೇಕು, ಇಲ್ಲವಾದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ತನ್ನ ಮೌಲ್ಯ ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ತಂಡದಿಂದ ಕೈಬಿಟ್ಟ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ ಸಾಂತ್ವನ ಹೇಳಿದ ಕೋಚ್ ಗಂಭೀರ್!



















