ಮೈಸೂರು : ಜಿಲ್ಲೆಯ ಮಾದಹಳ್ಳಿ ಗ್ರಾಮದಲ್ಲಿ ತಾಯಿಯನ್ನೇ ಪುತ್ರ ಕೊಲೆಗೈದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಸುಧಾ (48) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ಪುತ್ರ ಶಿವರುದ್ರಪ್ಪ ಎಸ್ (34) ತಾಯಿ ಹತ್ಯೆ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದಾನೆ. ಕುಟುಂಬ ಕಲಹ ಹಾಗೂ ಪರಪುರುಷನ ಸಹವಾಸದ ವಿಚಾರ ಈ ಕೊಲೆಗೆ ಕಾರಣವೆಂದು ತಿಳಿದುಬಂದಿದೆ.
ಪರಪುರುಷನ ಸಂಗಕ್ಕೆ ಬಿದ್ದಿದ್ದ ತಾಯಿ ಸುಧಾಗೆ ಹಲವು ಬಾರಿ ಪುತ್ರ ಶಿವರುದ್ರಪ್ಪ ಬುದ್ದಿಮಾತು ಹೇಳಿದ್ದ ಎನ್ನಲಾಗಿದೆ. ಆದರೂ ತಾಯಿ ತನ್ನ ವರ್ತನೆ ಬದಲಿಸದೇ ಇದ್ದುದರಿಂದ ತಾಯಿ-ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತೆಂದು ತಿಳಿದುಬಂದಿದೆ. ತಾಯಿ ಸುಧಾ ಬೇರೆಯವರ ಬೈಕ್‌ನಲ್ಲಿ ತೆರಳುತ್ತಿದ್ದುದನ್ನು ಕೂಡ ಪುತ್ರ ಶಿವರುದ್ರಪ್ಪ ಕಣ್ಣಾರೆ ಕಂಡಿದ್ದ ಎನ್ನಲಾಗಿದೆ.
ನಿನ್ನೆ ಬೆಳಿಗ್ಗೆ ಇದೇ ವಿಚಾರವಾಗಿ ತಾಯಿ ಹಾಗೂ ಮಗನ ನಡುವೆ ಜಗಳ ನಡೆದಿದ್ದು, ಕೋಪಗೊಂಡ ಪುತ್ರ ಶಿವರುದ್ರಪ್ಪ ತಾಯಿಗೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿದ್ದ ಸುಧಾಳನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ, ತಾನೇ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಪುತ್ರ ಶಿವರುದ್ರಪ್ಪ, ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ.
ಬಳಿಕ ಮಾರ್ಗ ಮಧ್ಯೆ ಮತ್ತೆ ತಾಯಿಯ ಮೇಲೆ ಮತ್ತೆ ಹಲ್ಲೆ ನಡೆಸಿ, ತಲೆ ಮೇಲೆ ಕಲ್ಲು ಹಾಕಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ನಂತರ ಕಣಿಯನಹುಂಡಿ ಸಮೀಪದ ತೋಟಕ್ಕೆ ಮೃತದೇಹ ಕೊಂಡೊಯ್ದು ಸುಟ್ಟು ಹಾಕಿ ಪರಾರಿಯಾಗಿದ್ದಾನೆ. ಈ ಕೃತ್ಯಕ್ಕೆ ಆರೋಪಿಯ ಚಿಕ್ಕಪ್ಪನ ಮಕ್ಕಳಾದ ಆಕಾಶ್ (24) ಹಾಗೂ ಅಭಿ (22) ಸಹ ಸಾಥ್ ನೀಡಿದ್ದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಜಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣವನ್ನು ಸರ್ಕಲ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ನೇತೃತ್ವದ ತಂಡ ಭೇದಿಸಿದ್ದು, ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಗಂಟಲಿನಲ್ಲಿ ಬೆಟ್ಟದ ನಲ್ಲಿಕಾಯಿ ಸಿಲುಕಿ 3 ವರ್ಷದ ಕಂದಮ್ಮ ಸಾವು!



















