ಕೋಲಾರ : ಕೋಲ್ಕತ್ತಾದ ಹೌರಾ ಜಂಕ್ಷನ್‌ನಿಂದ ಬೆಂಗಳೂರಿನ ಎಸ್.ಎಂ.ವಿ.ಟಿ.ಗೆ ಬರುತ್ತಿದ್ದ ಡುರೊಂಟೊ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12246)ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಿ ರೈಲನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ತಪಾಸಣೆಯಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದೆ, ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಬೆದರಿಕೆ ಮಾಹಿತಿ ಸಿಗುತ್ತಿದ್ದಂತೆಯೇ ರೈಲ್ವೇ ಪೊಲೀಸರು, ಬಂಗಾರಪೇಟೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ರೈಲನ್ನು ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿ ತಪಾಸಣೆ ನಡೆಸಿದ್ದಾರೆ.
ಇನ್ನು, ಪ್ರಕರಣ ಸಂಬಂಧ ಪಶ್ಚಿಮ ಬಂಗಾಳ ಮೂಲದ ಹಾಗೂ ರೈಲಿನಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ್ ದೌಲಿ ಎಂಬಾತನನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿದಿದೆ.
ಪ್ರಾಥಮಿಕ ತನಿಖೆಯಲ್ಲಿ, ಶಶಾಂಕ್ ದೌಲಿ ಮತ್ತು ಪ್ರಯಾಣಿಕ ಪ್ರಸಾದ್ ನಡುವೆ ಜಗಳ ನಡೆದಿದ್ದು, ಬಳಿಕ ಪ್ರಸಾದ್ ಬಾಂಬ್ ಬೆದರಿಕೆ ಕುರಿತು ದೂರು ನೀಡಿ ರೈಲಿನಿಂದ ಇಳಿದಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಎಲ್ಲಾ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಸಿಕ್ಕಿತು ಮಳೆಗೆ ತೋಯ್ದ ಡೈರಿ : ಪ್ರತಿಯೊಂದು ಪುಟದಲ್ಲೂ ಅಡಗಿದೆ ಹೃದಯಸ್ಪರ್ಶಿ ಪ್ರೇಮ ಕಾವ್ಯ!


















