ಹೈದರಾಬಾದ್ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರಿಗೆ ಸೇರಿದ ಹೈದರಾಬಾದ್‌ನ ಐಷಾರಾಮಿ ಬಂಗಲೆಯನ್ನು ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ. ಸುಮಾರು 1.5 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿ ತೆರಿಗೆಯನ್ನು ದೀರ್ಘಕಾಲದಿಂದ ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಪಾಲಿಕೆ ಹೇಳಿದೆ.
ಹೈದರಾಬಾದ್‌ನ ಶ್ರೀನಗರ ಕಾಲೋನಿಯಲ್ಲಿರುವ ಈ ಆಸ್ತಿಯು 2017ರಿಂದಲೂ ತೆರಿಗೆ ಸುಸ್ತಿದಾರರ ಪಟ್ಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಕಾನೂನುಬದ್ಧ ವಾರಸುದಾರರಿಗೆ ತೆರಿಗೆ ಪಾವತಿಸುವಂತೆ ಅಧಿಕಾರಿಗಳು ಹಲವಾರು ಬಾರಿ ನೋಟಿಸ್ ನೀಡಿದ್ದರು. ಇತ್ತೀಚೆಗೆ ಫೆಬ್ರವರಿ ತಿಂಗಳಲ್ಲೂ ಮತ್ತೊಮ್ಮೆ ಎಚ್ಚರಿಕೆ ನೋಟಿಸ್ ನೀಡಲಾಗಿತ್ತು. ಆದರೆ ವಾರಸುದಾರರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ತೆರಿಗೆ ಪಾವತಿಗೆ ನೀಡಿದ್ದ ಗಡುವು ಮುಗಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ಸೀಲ್ ಹಾಕಿದ್ದಾರೆ.
ವಿಜಯ್ ಮಲ್ಯ ಅವಧಿಯ ಬಾಕಿ?
ವಿಶೇಷವೆಂದರೆ, ಈ ಮನೆಯನ್ನು ಈ ಹಿಂದೆ ಉದ್ಯಮಿ ವಿಜಯ್ ಮಲ್ಯ ಅವರಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಮಲ್ಯ ಅವರ ಬಳಿ ಈ ಆಸ್ತಿ ಇದ್ದ ಅವಧಿಯಲ್ಲೇ ತೆರಿಗೆ ಬಾಕಿ ಉಳಿಯಲು ಆರಂಭವಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಸ್ತುತ ಈ ಕಟ್ಟಡದ ಒಟ್ಟು ಬಾಕಿ ಮೊತ್ತವು ಬಡ್ಡಿ ಸೇರಿ 1.5 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಜಯಲಲಿತಾ ಅವರ ನಿಧನದ ನಂತರ ಈ ಆಸ್ತಿಯ ನಿರ್ವಹಣೆ ಮತ್ತು ಮಾಲೀಕತ್ವದ ವಿಷಯದಲ್ಲಿ ಉಂಟಾದ ಗೊಂದಲಗಳು ತೆರಿಗೆ ಬಾಕಿ ಉಳಿಯಲು ಮುಖ್ಯ ಕಾರಣ ಎನ್ನಲಾಗಿದೆ.
ತೆರಿಗೆ ಸುಸ್ತಿದಾರರ ವಿರುದ್ಧ ಜಿಎಚ್‌ಎಂಸಿ ಸಮರ
ಮಾರ್ಚ್ 31ರ ಆರ್ಥಿಕ ವರ್ಷದ ಅಂತ್ಯದ ಹಿನ್ನೆಲೆಯಲ್ಲಿ ಹೈದರಾಬಾದ್ ಮಹಾನಗರ ಪಾಲಿಕೆಯು ತೆರಿಗೆ ವಸೂಲಾತಿಗಾಗಿ ಬೃಹತ್ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಎಚ್‌ಎಂಸಿ ಕಮಿಷನರ್ ಆರ್.ವಿ. ಕರ್ಣನ್, “ನಾವು ಎಲ್ಲಾ ಪ್ರಮುಖ ಸುಸ್ತಿದಾರರಿಗೆ ನೋಟಿಸ್ ನೀಡಿದ್ದೇವೆ. ಜಯಲಲಿತಾ ಅವರ ವಾರಸುದಾರರಿಗೆ ಸೇರಿದ ಆಸ್ತಿಯೂ ಇದರಲ್ಲಿ ಸೇರಿದೆ.
ಕೇವಲ ಈ ಬಂಗಲೆ ಮಾತ್ರವಲ್ಲದೆ, ಹೈದರಾಬಾದ್‌ನಾದ್ಯಂತ ಕೋಟಿಗಟ್ಟಲೆ ತೆರಿಗೆ ಬಾಕಿ ಉಳಿಸಿಕೊಂಡಿರುವ 100ಕ್ಕೂ ಹೆಚ್ಚು ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳನ್ನು ಇತ್ತೀಚಿನ ವಾರಗಳಲ್ಲಿ ಸೀಲ್ ಮಾಡಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.ಸದ್ಯ ಜಿಎಚ್‌ಎಂಸಿ ವ್ಯಾಪ್ತಿಯಲ್ಲಿ ಸುಮಾರು 1,400 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಇದ್ದು, ತೆರಿಗೆ ಪಾವತಿದಾರರಿಗೆ ಬಡ್ಡಿ ಮನ್ನಾ ಮಾಡುವ ‘ಒನ್ ಟೈಮ್ ಸೆಟಲ್‌ಮೆಂಟ್'(ಒಂದು ಬಾರಿಗೆ ಬಾಕಿ ಪಾವತಿ) ಯೋಜನೆಯನ್ನೂ ಪಾಲಿಕೆ ಘೋಷಿಸಿದೆ. ಈ ಗಡುವು ಮುಗಿಯುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕಾರು!



















