ಟೆಹ್ರಾನ್/ವಾಷಿಂಗ್ಟನ್ : ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ದಿನೇ ದಿನೆ ಮಿತಿಮೀರುತ್ತಿದ್ದು, ಅಮೆರಿಕದ ನೌಕಾಪಡೆಯು ತನ್ನ ಸರಕು ಹಡಗನ್ನು ವಶಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಇರಾನ್ ಈಗ ಅಮೆರಿಕ ವಿರುದ್ಧ ನೇರ ದಾಳಿಗೆ ಮುಂದಾಗಿದೆ. ಒಮಾನ್ ಸಮುದ್ರದಲ್ಲಿ ಬೀಡುಬಿಟ್ಟಿರುವ ಅಮೆರಿಕದ ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಭೀಕರ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯು ಈ ಭಾಗದಲ್ಲಿ ಜಾರಿಯಲ್ಲಿದ್ದ ಅಸ್ಥಿರ ಕದನ ವಿರಾಮವನ್ನು ಬಹುತೇಕ ಅಂತ್ಯಗೊಳಿಸಿದ್ದು, ಪೂರ್ಣ ಪ್ರಮಾಣದ ಯುದ್ಧದ ಆತಂಕ ಮೂಡಿಸಿದೆ. ಅಮೆರಿಕದ ಪಡೆಗಳು ಇರಾನ್‌ನ ‘ತೌಸ್ಕಾ’ ಎಂಬ ವಾಣಿಜ್ಯ ಹಡಗನ್ನು ಬಲವಂತವಾಗಿ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಇರಾನ್‌ನ ಅರೆ-ಸರ್ಕಾರಿ ಸುದ್ದಿ ಸಂಸ್ಥೆ ‘ತಸ್ನಿಮ್’ ವರದಿ ಮಾಡಿದೆ.
ಅಮೆರಿಕದ ನೌಕಾಪಡೆಯು ಇರಾನ್‌ನ ಈ ಹಡಗು ದಿಗ್ಬಂಧನ ಉಲ್ಲಂಘಿಸಿದೆ ಎಂದು ಆರೋಪಿಸಿ, ಅದರ ಮೇಲೆ ಗುಂಡು ಹಾರಿಸಿ ತನ್ನ ವಶಕ್ಕೆ ಪಡೆದಿತ್ತು. ಈ ಘಟನೆಯನ್ನು “ಸಶಸ್ತ್ರ ಕಡಲ್ಗಳ್ಳತನ” ಎಂದು ಕರೆದಿರುವ ಇರಾನ್ ಸೇನೆಯು, ಅಮೆರಿಕದ ಉದ್ಧಟತನಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.
ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮಾಹಿತಿ ನೀಡಿದ್ದು, “ಪ್ರಸ್ತುತ ಇರಾನ್ ಹಡಗು ಅಮೆರಿಕದ ಮರೀನ್ ಪಡೆಯ ವಶದಲ್ಲಿದೆ. ಹಡಗಿನಲ್ಲಿ ಏನಿದೆ ಎಂಬ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಚೀನಾದಿಂದ ಬರುತ್ತಿದ್ದ ಈ ಹಡಗು ಅಮೆರಿಕದ ಹಣಕಾಸು ಇಲಾಖೆಯ ನಿರ್ಬಂಧಿತ ಪಟ್ಟಿಯಲ್ಲಿದೆ ಎಂದು ಅಮೆರಿಕ ಪ್ರತಿಪಾದಿಸಿದೆ. ಆದರೆ, ಇರಾನ್ ಈ ಆರೋಪಗಳನ್ನು ನಿರಾಕರಿಸಿದ್ದು, ಶಾಂತಿಯುತವಾಗಿ ಸಾಗುತ್ತಿದ್ದ ಹಡಗಿನ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕವೇ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಕಿಡಿಕಾರಿದೆ.
ಮುರಿದುಬಿದ್ದ ಶಾಂತಿ ಮಾತುಕತೆ, ಜಾಗತಿಕ ತಲ್ಲಣ
ಈ ಬೆಳವಣಿಗೆಯಿಂದಾಗಿ ಇರಾನ್ ಮತ್ತು ಅಮೆರಿಕ ನಡುವೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆ ಈಗ ಅನಿಶ್ಚಿತತೆಗೆ ಸಿಲುಕಿದೆ. ಇರಾನ್ ಈಗಾಗಲೇ ಮಾತುಕತೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ. ಒಂದೆಡೆ ಟ್ರಂಪ್ ಅವರು ಇರಾನ್‌ನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರೆ, ಇನ್ನೊಂದೆಡೆ ಅಮೆರಿಕದ ನೆಲೆಗಳನ್ನು ಹೊಂದಿರುವ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ. ಈ ಸಂಘರ್ಷದಿಂದಾಗಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯು ಬೂದಿ ಮುಚ್ಚಿದ ಕೆಂಡದಂತಾಗಿದ್ದು, ವಿಶ್ವದ ಆರ್ಥಿಕತೆಯ ಮೇಲೆ ಇದರ ಭೀತಿ ಆವರಿಸಿದೆ.
ಇದನ್ನೂ ಓದಿ : ಹೊರ್ಮುಜ್ ಜಲಸಂಧಿ ಮತ್ತೆ ಉದ್ವಿಗ್ನ : ಇರಾನ್ ಹಡಗನ್ನೇ ವಶಪಡಿಸಿಕೊಂಡ ಅಮೆರಿಕ ನೌಕಾಪಡೆ!



















